ರಾಣಾ ದಗ್ಗುಬಾಟಿ ಮದುವೆ ಡೇಟ್ ಕೊನೆಗೂ ಗೊತ್ತಾಯ್ತು!

Rana Daggubati Final
Published on

‘ಬಾಹುಬಲಿ’ ಸಿನಿಮಾ ಖ್ಯಾತಿಯ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಎಂಗೇಜ್‌ಮೆಂಟ್ ಏಪ್ರಿಲ್ 22ರಂದು ಹೈದರಾಬಾದ್‌ನಲ್ಲಿ ಆಗಿತ್ತು. ಸ್ವತಃ ರಾಣಾ, ಸೋಷಿಯಲ್ ಮೀಡಿಯಾದಲ್ಲಿ ತಾವು ಮದುವೆಯಾಗುತ್ತಿರುವ ಹುಡುಗಿಯ ಫೋಟೋ ಹಾಕಿಕೊಂಡು ಸಂಭ್ರಮಿಸಿದ್ದರು.

ಟಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಆಗಿರುವ 35 ವರ್ಷದ ರಾಣಾ, ಮೇ 12ರಂದು ತಾವು ಮಿಹಿಕಾ ಬಜಾಜ್ ಅವರನ್ನು ಮದುವೆಯಾಗುತ್ತಿರುವುದಾಗಿ ಅಧಿಕೃತವಾಗಿ ಹೇಳಿಕೊಂಡಿದ್ದರು. ಅದರಂತೆ ಅವರಿಬ್ಬರ ಎಂಗೇಜ್ಮೆಂಟ್ ಸದ್ದಿಲ್ಲದೆ ನಡೆದಿದೆ. ಕರೊನಾ ಹಿನ್ನೆಲೆಯಲ್ಲಿ ಸೀಮಿತ ಜನರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ನಿಶ್ಚಿತಾರ್ಥವಾದರೂ ಮದುವೆಯ ದಿನಾಂಕ ಪಕ್ಕಾ ಆಗಿರಲಿಲ್ಲ.

ಬಹುಶಃ ಈ ವರ್ಷದ ಕೊನೆಯಲ್ಲಿ ಮದುವೆ ಆಗುವ ಸಾಧ್ಯತೆ ಇದೆ ಎಂದು ರಾಣಾ ಸಹ ಹೇಳಿಕೊಂಡಿದ್ದರು. ಮೂಲಗಳ ಪ್ರಕಾರ, ಮದುವೆ ಆಗಸ್ಟ್‌ನಲ್ಲಿ ನಡೆಯಲಿದೆಯಂತೆ. ಅದರಲ್ಲೂ ಆಗಸ್ಟ್ 8ರಂದು ಒಳ್ಳೆಯ ಮುಹೂರ್ತ ಕೂಡಿ ಬಂದಿರುವುದರಿಂದ ಅಂದೇ ಮದುವೆಯಾಗುವ ಸಾಧ್ಯತೆ ಇದೆ.ಈ ಬಗ್ಗೆ ಇನ್ನಷ್ಟೇ, ರಾಣಾ ಕಡೆಯಿಂದ ಅಧಿಕೃತ ಪ್ರಕಟಣೆ ಬೀಳಬೇಕಿದೆ.

ಆಗಸ್ಟ್ 8ರಂದೇ ರಾಣಾ ಮದುವೆಯಾದರೆ, ಅವರ ಮುಂದಿನ ಚಿತ್ರ ‘ವಿರಾಟಪರ್ವ’ ಚಿತ್ರದ ಚಿತ್ರೀಕರಣ ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ. ಲಾಕ್‌ಡೌನ್‌ಗೂ ಮುನ್ನ ‘ವಿರಾಟಪರ್ವ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿತ್ತು. ಲಾಕ್‌ಡೌನ್‌ನಿಂದಾಗಿ ನಿಂತಿತ್ತು. ಇದೀಗ ಮದುವೆಗೆ ಎರಡೇ ತಿಂಗಳಿರುವಾಗ, ಮೊದಲು ಮದುವೆ ಮುಗಿಸಿ, ಆ ನಂತರ ಚಿತ್ರದ ಚಿತ್ರೀಕರಣದಲ್ಲಿ ರಾಣಾ ಭಾಗವಹಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net