

ಬೆಂಗಳೂರು: ಬಾಲಿವುಡ್ ಬಗ್ಗೆ, ಬಾಲಿವುಡ್ನಲ್ಲಿರುವ ಡ್ರಗ್ಸ್ ಸೇವನೆ ಬಗ್ಗೆ ನಟಿ ಕಂಗನಾ ರಣಾವತ್ ಸಾಕಷ್ಟು ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಬಾಲಿವುಡ್ನಲ್ಲಿರುವ ಶೇ. 99ರಷ್ಟು ಜನ ಡ್ರಗ್ಸ್ ಸೇವಿಸುತ್ತಾರೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಸಾಕಷ್ಟು ಚರ್ಚೆಗಳಾಗಿವೆ.
ಇದನ್ನೂ ಓದಿ: ಲಾಕ್ಡೌನ್ ಬಳಿಕ ಹಾಸ್ಯ ನಟ ಧರ್ಮಣ್ಣ ಸಖತ್ ಬಿಜಿ
ಇತ್ತೀಚೆಗೆ ಸಂಸತ್ತಿನಲ್ಲೂ ಈ ವಿಷಯದ ಬಗ್ಗೆ ಪ್ರತಿಧ್ವನಿಯಾಗಿತ್ತು. ಈ ವಿಷಯವಾಗಿ ಮಾತನಾಡಿದ್ದ ಹಿರಿಯ ನಟಿ ಮತ್ತು ಸಮಾಜವಾದಿ ಪಕ್ಷದ ಸಂಸದೆಯಾಗಿರುವ ಜಯಾ ಬಚ್ಚನ್, 'ಸೋಷಿಯಲ್ ಮೀಡಿಯಾದಲ್ಲಿ ಚಿತ್ರರಂಗದವರನ್ನು ಹರಿದು ಮುಕ್ಕುತ್ತಿದ್ದಾರೆ. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವವರೇ ಗಟಾರ ಎಂದು ಕರೆಯುತ್ತಿದ್ದಾರೆ. ಅಂತಹ ಶಬ್ಧಗಳನ್ನು ಉಪಯೋಗಿಸುವುದಕ್ಕೆ ಬಿಡಬಾರದು' ಎಂದು ಕಂಗನಾ ಹೆಸರನ್ನು ಪ್ರಸ್ತಾಪಿಸದೆಯೇ ಹೇಳಿದ್ದರು.
ಈಗ ಕನ್ನಡತಿ ರಮ್ಯಾ ಸಹ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಸಾಕ್ಷಿಗಳಿದ್ದರೆ ಪೊಲೀಸರಿಗೆ ಕೊಡು ಎಂದು ಕಂಗನಾಗೆ ಸಲಹೆ ಕೊಟ್ಟಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ಡ್ರಗ್ಸ್ ಮಾಫಿಯಾ ಬಗ್ಗೆ ಗೊತ್ತಿದ್ದರೆ ಬಹಿರಂಗ ಮಾಡಿ. ಪೊಲೀಸರಿಗೆ ಸಾಕ್ಷಿ ಕೊಡಿ. ಆ ನಂತರ ಅವರು ಅವರ ಕೆಲಸ ಮಾಡುತ್ತಾರೆ. ಇದರಿಂದ ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಸಾರಿರುವ ನಾರ್ಕೋಟಿಕ್ಸ್ ಬ್ಯೂರೋಗೆ ಬಹಳ ಸಹಾಯವಾಗುತ್ತದೆ. ಏನೇ ಮಾಡಿದರೂ ಒಳ್ಳೆಯ ಉದ್ದೇಶಕ್ಕೆ ಮಾಡಿ, ಸೇಡಿಗಾಗಿ ಅಲ್ಲ' ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಮತ್ತಷ್ಟು ಬರೆದಿರುವ ಅವರು, 'ಬೇಸರದ ವಿಷಯವೆಂದರೆ, ನಿಮ್ಮ ಉದ್ದೇಶಗಳೆಲ್ಲಾ ತಪ್ಪಾಗಿ ಅರ್ಥೈಸಲಾಗುತ್ತಿದೆ. ಹೆದರಿಸುವ ಬದಲು, ಡ್ರಗ್ಸ್ ಜಾಲದಲ್ಲಿರುವವರಿಗೆ ಸಹಾಯ ಮಾಡಿ. ಸಾಧ್ಯವಾದರೆ ಪುನರ್ವಸತಿ ಕೇಂದ್ರ ಶುರು ಮಾಡಿ. ಸಾಮಾನ್ಯವಾಗಿ ಡ್ರಗ್ಸ್ ತೆಗೆದುಕೊಳ್ಳುವವರಿಗೆ ಈ ಜೀವನ ಎಷ್ಟು ಸುಂದರ ಎಂದು ಗೊತ್ತಿರುವುದಿಲ್ಲ. ಆಧ್ಯಾತ್ಮದಲ್ಲಿ ನಿಮಗೆ ಆಸಕ್ತಿ ಇರುವುದರಿಂದ ಈ ಬಗ್ಗೆ ಗೊತ್ತಿರುತ್ತದೆ. ಈ ವಿಷಯದಲ್ಲಿ ನಿಜಕ್ಕೂ ನಿಮಗೇನಾದರೂ ಮಾಡಬೇಕೆನಿಸಿದರೆ, ಡ್ರಗ್ಸ್ ವಿರುದ್ಧ ಸಮರ ಸಾರಿ. ನೀವು ಸಹ ಒಂದು ಕಾಲಕ್ಕೆ ಡ್ರಗ್ ಅಡಿಕ್ಟ್ ಆಗಿದ್ದಿರಿ ಎಂದು ಹೇಳಿಕೊಂಡಿದ್ದೀರಿ. ಆ ಧೈರ್ಯ ಮೆಚ್ಚಲೇಬೇಕು. ನಿಮ್ಮ ಅನುಭವವನ್ನು ಹಂಚಿಕೊಂಡು, ಡ್ರಗ್ಸ್ ಮೀರಿ ಬೆಳೆಯುವುದ ಹೇಗೆ ಎಂದು ಜಗತ್ತಿಗೆ ತೋರಿಸಿಕೊಡಿ' ಎಂದು ರಮ್ಯಾ ಸಲಹೆ ನೀಡಿದ್ದಾರೆ.