

ಕರೊನಾ ಮತ್ತು ಲಾಕ್ಡೌನ್ನಿಂದ ಚಿತ್ರೀಕರಣ ಚಟುವಟಿಕೆಗಳು ನಿಂತಿರಬಹುದು, ಚಿತ್ರ ಪ್ರದರ್ಶನ ರದ್ದಾಗಿರಬಹುದು. ಆದರೆ, ರಾಮ್ಗೋಪಾಲ್ ವರ್ಮಾಗೆ ಇದ್ಯಾವುದರಿಂದಲೂ ಏನೂ ಸಮಸ್ಯೆ ಆಗಿಲ್ಲ. ಅಷ್ಟೆಲ್ಲಾ ಸಮಸ್ಯೆಗಳ ಮಧ್ಯೆಯೂ ಅವರು ಸಿನಿಮಾ ಜಪ ಮುಂದುವರೆಸಿದ್ದಾರೆ ಮತ್ತು ಚಿತ್ರಮಂದಿರ ಇಲ್ಲದಿದ್ದರೂ ಈಗಾಗಲೇ ಒಂದು ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಇಂದು ರಾತ್ರಿ, ಅವರ ನಿರ್ದೇಶನದ ಇನ್ನೊಂದು ಹೊಸ ಸಿನಿಮಾ ನೇಕೆಡ್ ಬಿಡುಗಡೆಯಾಗಲಿದೆ.
ಇದನ್ನೂ ನೋಡಿ: ಸುಶಾಂತ್ ಸಿಂಗ್ ಅಜರಾಮರ; ಕುಟುಂಬದಿಂದ ಹೊಸ ನಿರ್ಧಾರ…
ಕೆಲವೇ ದಿನಗಳ ಹಿಂದೆ, ಮಿಯಾ ಮಲ್ಕೋವಾ ಅಭಿನಯದ ಕ್ಲೈಮ್ಯಾಕ್ಸ್ ಚಿತ್ರವನ್ನು ಬಿಡುಗಡೆ ಮಾಡಿದ್ದ ರಾಮ್ಗೋಪಾಲ್ ವರ್ಮಾ, ಇಂದು ನೇಕೆಡ್ ಎಂಬ ಚಿತ್ರವನ್ನು ಡಿಜಿಟಲ್ ವೇದಿಕೆಯ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ. ಈ ಚಿತ್ರವನ್ನು ಅವರು ತೆಲುಗು, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಇಂಗ್ಲೀಷ್ನಲ್ಲಿ ಚಿತ್ರದ ಹೆಸರು ನೇಕೆಡ್ ಎಂದಾರೆ, ತೆಲುಗು ಮತ್ತು ಹಿಂದಿಯಲ್ಲಿ ಕ್ರಮವಾಗಿ ನಗ್ನಂ ಮತ್ತು ನಂಗಾ ಎಂದಿರಲಿದೆ.
22 ನಿಮಿಷದ ತಮ್ಮ ಹೊಸ ಚಿತ್ರವನ್ನು ಎರಾಟಿಕ್ ಥ್ರಿಲ್ಲರ್ ಎಂದು ಕರೆದುಕೊಂಡಿದ್ದಾರೆ ವರ್ಮಾ. ಈ ಚಿತ್ರವನ್ನು ಅವರು ಶ್ರೇಯಸ್ ಗ್ರೂಪ್ ಆಫ್ ಕಂಪೆನಿಸ್ ಆರಂಭಿಸಿರುವ ಎಟಿಟಿ (ಎನಿ ಟೈಮ್ ಥಿಯೇಟರ್) ಮೂಲಕ ರಾತ್ರಿ 9ಕ್ಕೆ ಬಿಡುಗಡೆ ಮಾಡಲಿದ್ದಾರೆ. ಚಿತ್ರ ನೋಡುವುದಕ್ಕೆ ಅವರು 200 ರೂಪಾಯಿಗಳ ಶುಲ್ಕವನ್ನು ನಿಗದಿಪಡಿಸಿದ್ದು, ಎಷ್ಟು ಜನ 200 ರೂಪಾಯಿ ಕೊಟ್ಟು, ಈ ಚಿತ್ರವನ್ನು ನೋಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ.
ಇದಲ್ಲದೆ ಮುಂದಿನ ದಿನಗಳಲ್ಲಿ ಎಟಿಟಿ ಮೂಲಕ ಇನ್ನಷ್ಟು ಚಿತ್ರಗಳನ್ನು ತೋರಿಸುವುದಕ್ಕೆ ವರ್ಮಾ ಸಿದ್ಧತೆ ನಡೆಸಿದ್ದಾರೆ. ಮರ್ಡರ್, ದಿ ಮ್ಯಾನ್ ಹೂ ಕಿಲ್ಡ್ ಗಾಂಧಿ, ಕಿಡ್ನಾಪಿಂಗ್ ಆಫ್ ಕತ್ರೀನಾ ಕೈಫ್ ಮುಂತಾದ ಚಿತ್ರಗಳನ್ನು ವರ್ಮಾ ಈಗಾಗಲೇ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಈ ಚಿತ್ರಗಳನ್ನು ಎಟಿಟಿ ಮೂಲಕ ಬಿಡುಗಡೆ ಮಾಡಲಿದ್ದಾರೆ.