

ಕಳೆದ ಕೆಲವು ದಿನಗಳಿಂದ ತಮ್ಮ ಹೊಸ ಚಿತ್ರಗಳ ಪೋಸ್ಟರ್, ಟೀಸರ್ ಬಿಡುಗಡೆ ಮಾಡುವುದರಲ್ಲಿ ಬ್ಯುಸಿಯಾಗಿದ್ದ ಹಿರಿಯ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಇದೀಗ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ಅರ್ನಬ್ ವಿರುದ್ಧ ಸತತವಾಗಿ ಟ್ವೀಟ್ಗಳನ್ನು ಮಾಡುತ್ತಿದ್ದಾರೆ.
ಇಷ್ಟಕ್ಕೂ ವರ್ಮಾಗ್ಯಾಕ್ ಅರ್ನಬ್ ಮೇಲೆ ಸಿಟ್ಟು? ಅರ್ನಬ್ ಏನಾದರೂ ವರ್ಮಾ ಅವರ ಕಾಲೆಳೆದರಾ? ಅಥವಾ ಅವರ ಚಿತ್ರಗಳ ಬಗ್ಗೆ ಏಬಾದರೂ ಕೆಟ್ಟದಾಗಿ ಮಾತನಾಡಿದರಾ? ಎಂಬ ಪ್ರಶ್ನೆಗಳು ಬರಬಹುದು. ಹಾಗೇನಾದರೂ ಹಾಗಿದ್ದರೆ, ವರ್ಮಾ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲವೇನೋ? ಅದನ್ನೇ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದ ವರ್ಮಾ ಇನ್ನಷ್ಟು ಸುದ್ದಿಯಲ್ಲಿರುತ್ತಿದ್ದರು.
ಅರ್ನಬ್ ಇತ್ತೀಚೆಗೆ ಬಾಲಿವುಡ್ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದಾರಂತೆ. ಅವರ ಮಾತುಗಳನ್ನು ಕೇಳಿ ಕೆರಳಿರುವ ವರ್ಮಾ, ಅನರ್ಬ್ ವಿರುದ್ಧ ಹರಿಹಾಯ್ದಿರುವುದಷ್ಟೇ ಅಲ್ಲ, ಮಿಕ್ಕ ಸೆಲೆಬ್ರಿಟಿಗಳು ಯಾಕೆ ಬಾಯಿಮುಚ್ಚಿಕೊಂಡು ಅವರು ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ಗಳನ್ನು ಮಾಡಿರುವ ಅವರು, 'ಬಾಲಿವುಡ್ ಬಗ್ಗೆ ಅರ್ನಬ್ ಅಷ್ಟು ಕೆಟ್ಟದಾಗಿ ಮಾತನಾಡುವುದು ಕೇಳಿ ಬಹಳ ಶಾಕ್ ಆಯಿತು. ಇದನ್ನು ಅವರ ಅತ್ಯಂತ ಕೆಟ್ಟ ಉದ್ಯಮ ಎಂದು ಕರೆಯುತ್ತಿದ್ದಾರೆ. ಇಲ್ಲಿ ರೇಪಿಸ್ಟ್ಗಳು ಮತ್ತು ಗ್ಯಾಂಗ್ಸ್ಟರ್ಗಳೇ ಹೆಚ್ಚಿದ್ದಾರೆ ಎನ್ನುವ ತರಹ ಮಾತನಾಡುತ್ತಿದ್ದಾರೆ' ಎಂದು ಬೇಸರ ಹೊರಹಾಕಿದ್ದಾರೆ ವರ್ಮಾ.
'ಸುಶಾಂತ್ ಸಾವಿನ ಬಗ್ಗೆ ಅರ್ನಬ್ ಮಾತನಾಡಿದ್ದು ನಿಜಕ್ಕೂ ವಿಚತ್ರ ಎಂದನಿಸಿತು. ಅವರ ಪ್ರಕಾರ, ದಿವ್ಯಾ ಭಾರತಿ, ಜಿಯಾ ಖಾನ್, ಶ್ರೀದೇವಿ ಮತ್ತು ಸುಶಾಂತ್ ಸಾವಿಗೆ ಕಾರಣ ಬಾಲಿವುಡ್ ಅಂತೆ. 25 ವರ್ಷಗಳ ಅಂತರದಲ್ಲಿ ಈ ನಾಲ್ಕು ಸಾವುಗಳು ಸಂಭವಿಸಿವೆ. ಈ ನಾಲ್ಕೂ ಕೇಸುಗಳಲ್ಲಿ ಏನೇನೋ ಆಗಿವೆ ಮತ್ತು ಇದರ ಹಿಂದೆ ಯಾರ್ಯಾರೋ ಇದ್ದಾರೆ. ಅದನ್ನೆಲ್ಲಾ ಬಿಟ್ಟು, ಇದಕ್ಕೆಲ್ಲಾ ಕಾರಣ ಬಾಲಿವುಡ್ ಎನ್ನುವಂತಹ ಬಾಲಿಷ ಮಾತುಗಳನ್ನು ಅರ್ನಬ್ ಆಡುತ್ತಿದ್ದಾರೆ' ಎಂದು ವರ್ಮಾ ಹೇಳಿದ್ದಾರೆ.
ಈ ವಿಚಾರವಾಗಿ ಕರಣ್ ಜೋಹರ್, ಮಹೇಶ್ ಭಟ್, ಶಾರೂಖ್ ಖಾನ್, ಆದಿತ್ಯ ಚೋಪ್ರಾ, ಸಲ್ಮಾನ್ ಖಾನ್ ಮುಂತಾದವರನ್ನು ಪ್ರಶ್ನಿಸಿರುವ ಅವರು, 'ನೀವೆಲ್ಲಾ ಅವರಿಗೆ ಯಾಕೆ ಅಷ್ಟು ಹೆದರುತ್ತೀರಾ ಎಂಬುದು ಅರ್ಥವಾಗುತ್ತಿಲ್ಲ. ನಿಮ್ಮ ದೊಡ್ಡ ಕ್ಯಾಬಿನ್ನ ಮೂಲೆಯಲ್ಲಿ ಬಚ್ಚಿಟ್ಟುಕೊಳ್ಳುವ ಬದಲು, ಒಟ್ಟಾಗಿ ಬಂದು ಈ ರೀತಿಯ ಆರೋಪಗಳಿಗೆ ಉತ್ತರ ಕೊಡಿ. ಅರ್ನಬ್ ಇಷ್ಟೆಲ್ಲಾ ಮಾತಾಡುತ್ತಿರುದು, ನಮ್ಮಲ್ಲಿ ಒಗ್ಗಟಿಲ್ಲ ಮತ್ತು ಈ ಬಗ್ಗೆ ಪ್ರಶ್ನಿಸುವ ನರ ಇಲ್ಲ ಎಂಬ ಕಾರಣಕ್ಕಾಗಿ. ಈಗಲಾದರೂ ಎದ್ದು ಬನ್ನಿ' ಎಂದು ಅವರು ಕರೆ ನೀಡಿದ್ದಾರೆ.
ಅರ್ನಬ್ ಬಗ್ಗೆ ಚಿತ್ರ ಮಾಡುವುದಾಗಿ ಘೋಷಿಸಿರುವ ವರ್ಮಾ, 'ನೀವೆಲ್ಲಾ ಏನು ಮಾಡುತ್ತೀರೋ ಗೊತ್ತಿಲ್ಲ. ನಾನಂತೂ ಅರ್ನಬ್ ಬಗ್ಗೆ ಸಿನಿಮಾ ಮಾಡಿ, ಆತ ಎಂತಹ ವ್ಯಕ್ತಿ ಎಂದು ತೋರಿಸುತ್ತೇನೆ. ಆತನನ್ನು ಬೆತ್ತಲು ಮಾಡುತ್ತೇನೆ' ಎಂದು ವರ್ಮಾ ಶಪಥ ಮಾಡಿದ್ದಾರೆ.