ಹೈದರಾಬಾದ್​ ಬಿಟ್ಟು ಗೋವಾ ಸೇರಿದರಂತೆ ರಾಮ್​ಗೋಪಾಲ್​ ವರ್ಮಾ ...

Ramgopal Varma - Final
Published on

ಪಣಜಿ: ಕಳೆದ ಹಲವು ವರ್ಷಗಳಿಂದ ಮುಂಬೈನಲ್ಲಿ ಬೀಡುಬಿಟ್ಟಿದ್ದ, ಒಂದರಹಿಂದೊಂದು ಸಿನಿಮಾ ನಿರ್ದೇಶಿಸಿದ್ದ ಹಿರಿಯ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಇದೀಗ ಹೈದರಾಬಾದ್​ ಬಿಟ್ಟು, ಗೋವಾ ಸೇರಿದ್ದಾರಂತೆ. ಹಾಗಂತ ಅವರೇ ಇತ್ತೀಚೆಗೆ ಒಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ತೆಲುಗು ಚಿತ್ರ 'ಶಿವ' ಮೂಲಕ ನಿರ್ದೇಶಕರಾದ ರಾಮ್​ಗೋಪಾಲ್​ ವರ್ಮಾ, 90ರ ದಶಕದ ಮಧ್ಯಭಾಗದವರೆಗೂ ತೆಲುಗಿನ ಹಲವು ಚಿತ್ರಗಳನ್ನು ನಿರ್ದೇಶಿಸಿದರು. ಆ ನಂತರ ಮುಂಬೈಗೆ ಶಿಫ್ಟ್​ ಆದ ಅವರು, ಅಲ್ಲೇ ಹಲವು ವರ್ಷಗಳ ಕಾಲ ನೆಲೆಯೂರಿದ್ದರು.

ಕೆಲವು ವರ್ಷಗಳ ಹಿಂದೆ ಹೈದರಾಬಾದ್​ನಲ್ಲಿ ಕಂಪೆನಿ ಎಂಬ ಆಫೀಸ್​ ಪ್ರಾರಂಭಿಸಿದ್ದ ರಾಮ್​ಗೋಪಾಲ್​ ವರ್ಮಾ, ಆ ಆಫೀಸಿನಿಂದ ಸಾಕಷ್ಟು ಸುದ್ದಿಯಾಗಿದ್ದರು. ಅಲ್ಲಿನ ಪ್ರತಿಯೊಂದು ರೂಮಿಗೂ ಒಬ್ಬ ಜನಪ್ರಿಯ ವ್ಯಕ್ತಿಯ ಹೆಸರನ್ನು ಅವರು ಇಟ್ಟಿದ್ದರು. ಡೊನಾಲ್ಡ್​ ಟ್ರಂಪ್​, ದಾವೂದ್​ ಇಬ್ರಾಹಿಂ, ತುಘಲಕ್​ ... ಹೀಗೆ ಪ್ರತಿಯೊಂದು ರೂಮಿಗೂ ಒಬ್ಬೊಬ್ಬ ಜನಪ್ರಿಯ ವ್ಯಕ್ತಿಯ ಹೆಸರಿಟ್ಟು, ಆ ಆಫೀಸ್​ನ ವಿಭಿನ್ನವಾಗಿ ಅಲಂಕರಿಸಿದ್ದರು.

ಆದರೆ, ಇದೀಗ ಅವರು ಹೈದರಾಬಾದ್​ ಬಿಟ್ಟು ಗೋವಾಗೆ ಶಿಫ್ಟ್​ ಆಗಿದ್ದಾರಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಅದಕ್ಕೆ ಕಾರಣವೂ ಇದೆ. 'ನಾನು ಮಾಡುವ ಚಿತ್ರಗಳಿಗೆ ಗೋವಾ ಹೇಳಿ ಮಾಡಿಸಿದ ಜಾಗ. ನಾನು ಇನ್ನು ಮುಂದೆ ಮುಂಬೈನಲ್ಲಿ ಇರುವುದಿಲ್ಲ. ಲಾಕ್​ಡೌನ್​ ಸಮಯದ ಬಹುತೇಕ ಸಮಯವನ್ನು ನಾನು ಹೈದರಾಬಾದ್​ನಲ್ಲೇ ಕಳೆದೆ. ಈಗ ಗೋವಾದಲ್ಲಿ ಆಫೀಸ್​ ಮಾಡಿದ್ದು, ಇನ್ನು ಮುಂದೆ ಅಲ್ಲಿಂದಲೇ ಕೆಲಸ ಮಾಡುತ್ತೇನೆ' ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net