

ಬಹುಶಃ ಕಳೆದ ಕೆಲವು ತಿಂಗಳುಗಳಲ್ಲಿ ಅತೀ ಹೆಚ್ಚು ಬಾರಿ ಕೇಳಲಾದ ಸಿನಿಮಾ ಸಂಬಂಧಿ ಪ್ರಶ್ನೆ ಏನಾದರೂ ಇದ್ದರೆ, ಅದು ಇದೇ ಇರಬೇಕು. ಪ್ರಶ್ನೆಯೇನೋ ಅತೀ ಹೆಚ್ಚು ಬಾರಿ ಕೇಳಲಾಗಿದೆ. ಆದರೆ, ಇದಕ್ಕೆ ನಿಖರವಾದ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ‘ಮಫ್ತಿ’ ಖ್ಯಾತಿಯ ನರ್ತನ್ ನಿರ್ದೇಶನದಲ್ಲಿ ಯಶ್ ನಟಿಸಲಿದ್ದಾರೆ ಎಂದು ಸುದ್ದಿ ಇದೆಯಾದರೂ, ಇದೇ ಅಂತಿಮ ಎಂದು ಹೇಳಲಾಗದು. ಏಕೆಂದರೆ, ನರ್ತನ್ ಜತೆಗೆ ಬೇರೆಬೇರೆ ಹೆಸರುಗಳು ಸಹ ಕೇಳಿ ಬರುತ್ತಲೇ ಇರುತ್ತವೆ. ಯಶ್ ಅಭಿನಯದಲ್ಲಿ ಪುರಿ ಜಗನ್ನಾಥ್ ಒಂದು ಚಿತ್ರ ಮಾಡುತ್ತಾರಂತೆ ಎಂಬ ಸುದ್ದಿ ಅದೊಂದು ದಿನ ಕೇಳಿಬಂತು. ಅದರ ಹಿಂದೆಯೇ, ಅದು ಪುರಿ ಅಲ್ಲವಂತೆ, ಬೋಯಾಪಾಟಿ ಶ್ರೀನು ಅಂತೆ ಎಂಬ ಸುದ್ದಿ ಬಂತು. ಹಾಗಾದರೆ, ಯಶ್ ಮುಂದಿನ ಚಿತ್ರ ಯಾರಿಗೆ? ಪುರಿಗೋ ಅಥವಾ ಶ್ರೀನುಗೋ? ಈ ಗೊಂದಲ ಮುಂದುವರಿದಿದೆ.
ಈ ಮಧ್ಯೆ, ಇಂಟರ್ನೆಟ್ನಲ್ಲಿ ಗುರುವಾರ ಇನ್ನೊಂದು ಫ್ರೆಶ್ ವಿಷಯವೊಂದು ಹೊರಬಿದ್ದಿದೆ. ಅದೇನೆಂದರೆ, ಕೆಲವು ವರ್ಷಗಳ ಹಿಂದೆ, ರಾಮ್ರಣ್ಗೆ ಬೋಯಾಪಾಟಿ ಶ್ರೀನು ಒಂದು ಕಥೆ ಮಾಡಿಟ್ಟುಕೊಂಡಿದ್ದರಂತೆ. ಆ ಕಥೆ ಯಾಕೋ ರಾಮ್ರಣ್ಗೆ ಇಷ್ಟವಾಗಿಲ್ಲ. ಬೇರೆ ಏನಾದರೂ ಇದ್ರೆ ನೋಡಿ ಎಂದಾಗ, ‘ವಿನಯ ವಿಧೇಯ ರಾಮ’ ಕಥೆ ತಂದರಂತೆ ಶ್ರೀನು. ಇದು ಇಷ್ಟವಾಗಿ ನಟಿಸಿದರಾದರೂ, ಚಿತ್ರ ಅಷ್ಟೇನೂ ಓಡಲಿಲ್ಲ. ಅರ್ಜುನ್ಗೆ ಹೇಳಿದ ಮೊದಲ ಕಥೆಯನ್ನು ಇನ್ನಷ್ಟು ತಿದ್ದಿ-ತೀಡಿದ ಶ್ರೀನು, ಅದನ್ನೇ ಯಶ್ಗೆ ಹೇಳಿದರಂತೆ. ಅದು ಕೇಳಿ ಖುಷಿಯಾಗಿರುವ ಯಶ್, ಶ್ರೀನುಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಅಷ್ಟೇ ಅಲ್ಲ, ಸದ್ಯದಲ್ಲೇ ಈ ಕುರಿತು ಅಧಿಕೃತ ಘೋಷಣೆಯೂ ಹೊರಬೀಳಲಿದೆ ಯಂತೆ. ಹಾಗಂತ ಇದೇ ಸುದ್ದಿ ಪಕ್ಕಾ ಎಂದು ಹೇಳು ವುದು ಕಷ್ಟ. ಯಾರಿಗೆ ಗೊತ್ತು, ಮುಂದಿನ ವಾರ ಇನ್ನೇನು ಹೊರಬೀಳಲಿದೆಯೋ?