

ಬೆಂಗಳೂರು: ರಕ್ಷಿತ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದ ‘ಉಳಿದವರು ಕಂಡಂತೆ’ ಸಿನಿಮಾ ತೆರೆಗೆ ಬಂದು ಏಳು ವರ್ಷಗಳಾದವು. ಅದಾದ ಬಳಿಕ ಅವರ ನಿರ್ದೇಶನದಲ್ಲಿ ಬೇರಾವ ಸಿನಿಮಾ ಮೂಡಿಬಂದಿರಲಿಲ್ಲ. ಇದೀಗ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ. ಆ ಚಿತ್ರದ ಹೆಸರು ‘ರಿಚರ್ಡ್ ಆಂಟನಿ’! ವಿಶೇಷ ಏನೆಂದರೆ, ಈ ಚಿತ್ರಕ್ಕೆ ‘ಹೊಂಬಾಳೆ ಫಿಲಂಸ್’ ಬಂಡವಾಳ ಹೂಡಲು ಮುಂದೆ ಬಂದಿದೆ. ಟೀಸರ್ ಸಹ ಭಾನುವಾರ ಬಿಡುಗಡೆ ಆಗಿದೆ. ಹಾಗಾದರೆ, ಏನಿದು ‘ರಿಚರ್ಡ್ ಆಂಟನಿ’ಯ ಕಥೆ? ಸದ್ಯಕ್ಕೆ ಆ ಗುಟ್ಟನ್ನು ಬಿಟ್ಟುಕೊಡದ ತಂಡ, ಇದು ‘ಉಳಿದವರು ಕಂಡಂತೆ’ ಚಿತ್ರದ ರಿಚ್ಚಿ ಅಲಿಯಾಸ್ ರಿಚರ್ಡ್ನ ಪೂರ್ವದ ಕಥೆ ಇರಬಹುದೇ ಎನ್ನಲಾಗುತ್ತಿದೆ.
ಮತ್ತೊಂದು ಕಡೆ ‘ಉಳಿದವರು ಕಂಡಂತೆ’ ಚಿತ್ರದಲ್ಲಿ ರಿಚ್ಚಿ ಪಾತ್ರ ಮತ್ತು ಅದರ ಸುತ್ತ ಸಾಕಷ್ಟು ಉತ್ತರಿಸಲಾಗದ ಪ್ರಶ್ನೆಗಳಿದ್ದವು. ಅದನ್ನು ಪ್ರಧಾನವಾಗಿಸಿ ‘ರಿಚರ್ಡ್ ಆಂಟನಿ’ ಸಿನಿಮಾ ಮೂಲಕ ತೋರಿಸಲು ಸಿದ್ಧತೆ ನಡೆಸಿದ್ದಾರೆ ರಕ್ಷಿತ್ ಶೆಟ್ಟಿ. ಈ ಮೊದಲ ‘ಉಳಿದವರು ಕಂಡಂತೆ’ ಸಿನಿಮಾಕ್ಕೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಇಲ್ಲಿಯೂ ಮುಂದುವರಿಯುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಕರಮ್ ಚಾವ್ಲಾ ಛಾಯಾಗ್ರಹಣ, ವಿಕ್ರಮ್ ಮೋರ್ ಸಾಹಸ ನಿರ್ದೇಶನ ಮಾಡಲಿದ್ದಾರೆ. 2022ರ ಜನವರಿಯಿಂದ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಸದ್ಯ ರಕ್ಷಿತ್ ನಟನೆಯ ‘777 ಚಾರ್ಲಿ’ ಸಿನಿಮಾ ಕೆಲಸಗಳು ಕೊನೇ ಹಂತದಲ್ಲಿವೆ. ಸಪ್ತ ಸಾಗರದಾಚೆಯೆಲ್ಲೊ’ ಚಿತ್ರದ ಚಿತ್ರೀಕರಣದಲ್ಲಿಯೂ ಅವರು ಪಾಲ್ಗೊಳ್ಳಬೇಕಿದೆ.