

ಬೆಂಗಳೂರು: ಈಗಾಗಲೇ ಶೂಟಿಂಗ್ ಮುಗಿಸಿಕೊಂಡಿರುವ ಯುವರತ್ನ ಚಿತ್ರ ಬಿಡುಗಡೆಗೆ ಹತ್ತಿರ ಬಂದಿದೆ. ಒಂದಾದ ಮೇಲೊಂದರಂತೆ ಹಾಡುಗಳ ಮೂಲಕ ಪುನೀತ್ ಅಭಿಮಾನಿಗಳಿಗೆ ಸರ್ಪ್ರೈಸ್ ಉಡುಗೊರೆ ನೀಡುತ್ತಿದ್ದಾರೆ. ಇದೀಗ ಮತ್ತೊಂದು ಹಾಡಿನ ಮೂಲಕ ಆಗಮಿಸುತ್ತಿದ್ದಾರೆ. ಈ ಹಾಡಿನ ಬಿಡುಗಡೆಗೆ ಇಬ್ಬರು ಸ್ಟಾರ್ಗಳು ಪುನೀತ್ಗೆ ಕೈ ಜೋಡಿಸಿದ್ದಾರೆ.
ಕನ್ನಡದ ರಕ್ಷಿತ್ ಶೆಟ್ಟಿ ಮತ್ತು ತೆಲುಗಿನ ವಿಜಯ್ ದೇವರಕೊಂಡ ಯುವರತ್ನ ಚಿತ್ರದ ಲಿರಿಕಲ್ ರೊಮ್ಯಾಂಟಿಕ್ ಹಾಡೊಂದನ್ನು ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಈ ವಿಚಾರವನ್ನು ಚಿತ್ರ ನಿರ್ಮಾಣ ಮಾಡಿದ ಹೊಂಬಾಳೆ ಸಂಸ್ಥೆ ಅಧಿಕೃತವಾಗಿ ಹೇಳಿಕೊಂಡಿದ್ದು, ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಹಾಡನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡರೆ, ತೆಲುಗು ಅವತರಣಿಕೆಯನ್ನು ವಿಜಯ್ ದೇವರಕೊಂಡ ರಿಲೀಸ್ ಮಾಡಲಿದ್ದಾರೆ.
ಕನ್ನಡದ ಜತೆಗೆ ತೆಲುಗಿನಲ್ಲಿಯೂ ಈ ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಈಗಿನಿಂದಲೇ ಪ್ರಚಾರ ಕಾರ್ಯಕ್ಕೆ ತಂಡ ತಯಾರಿ ನಡೆಸುತ್ತಿದೆ. ಈಗಾಗಲೇ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆ ಆಗಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂದಹಾಗೆ, ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಸಿನಿಮಾದಲ್ಲಿ ಪುನೀತ್ ಸಾಯೇಷಾ ಸೈಗಲ್ ನಾಯಕಿಯಾಗಿ ನಟಿಸಿದ್ದಾರೆ.