ನಟ ಚೇತನ್​ನನ್ನು ಹೊಗಳುವ ಭರದಲ್ಲಿ ಕನ್ನಡ ಸಿನಿಮಾ ಕೆಟ್ಟದೆಂದ ನೆಟ್ಟಿಗ! ರಕ್ಷಿತ್​ ಶೆಟ್ಟಿ ಕೊಟ್ಟ ತಿರುಗೇಟು ಹೇಗಿದೆ ನೋಡಿ..

kannada
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಚೇತನ್​ ಅಹಿಂಸಾ ಸದ್ಯ ಸುದ್ದಿಯಲ್ಲಿದ್ದಾರೆ. ಸದಾ ಒಂದಿಲ್ಲೊಂದು ವಿಚಾರದಲ್ಲಿ ವಿವಾದ ಎಳೆದುಕೊಳ್ಳುತ್ತಿರುವ ನಟನನ್ನು ಹೊಗಳುವ ಭರದಲ್ಲಿ ನೆಟ್ಟಿಗರೊಬ್ಬರು ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ತೆಗಳಿದ್ದು, ಇದೀಗ ನಟ ರಕ್ಷಿತ್ ಶೆಟ್ಟಿ ಅವರಿಗೆ ಸರಿಯಾದ ತಿರುಗೇಟು ನೀಡಿದ್ದಾರೆ.

ದಕ್ಷಿಣ ಭಾರತದ ಅತಿಕೆಟ್ಟ ಚಿತ್ರೋದ್ಯಮವಾದ ಕನ್ನಡ ಚಿತ್ರರಂಗದಲ್ಲಿ ಕೊನೆಗೂ ಒಂದು ಭರವಸೆ ಮೂಡಿದೆ. ಮರುಭೂಮಿಯಂತಿರುವ ಈ ಚಿತ್ರರಂಗದಲ್ಲಿ ಚೇತನ್​ ಅವರು ಮಳೆಯಂತಾಗಿದ್ದಾರೆ ಎಂದು ಸುದೀಪ್ತೊ ಮೊಂಡಲ್ ಹೆಸರಿನ ವ್ಯಕ್ತಿ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ನಟ ಚೇತನ್, "ನನ್ನ ಬಗ್ಗೆ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು. ನಾನು ನಿಮ್ಮ ಸಮಾನತೆಯ ಪತ್ರಿಕೋದ್ಯಮವನ್ನು ಗೌರವಿಸುತ್ತೇನೆ. ಕೆಎಫ್‌ಐಗೆ ಸಂಬಂಧಿಸಿದಂತೆ ನಾವು ಈ ಹಿಂದೆ ಅನೇಕ ಉತ್ತಮ ಚಲನಚಿತ್ರಗಳನ್ನು ಮಾಡಿದ್ದೇವೆ. ಪ್ರಸ್ತುತ ಇತರ ಇಂಡಸ್ಟ್ರಿಗಳಂತೆ ವಿಷಯ/ರಚನಾತ್ಮಕ ಸುಧಾರಣೆಗಳ ದೃಷ್ಟಿಯಿಂದ ವಿಕಸನಗೊಳ್ಳುತ್ತಿದ್ದೇವೆ. ಕಟುವಾಗಿದ್ದರೂ ನಿಮ್ಮ ಪ್ರತಿಕ್ರಿಯೆಯನ್ನು ನಾವು ತೆಗೆದುಕೊಳ್ಳುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ.

ಆದರೆ ಈ ವಿಚಾರದಲ್ಲಿ ಅಸಮಾಧಾನಗೊಂಡಿರುವ ನಟ ರಕ್ಷಿತ್​ ಶೆಟ್ಟಿ ಕನ್ನಡ ಸಿನಿಮಾವನ್ನು ಕೆಟ್ಟ ಸಿನಿಮಾ ಎಂದ ನೆಟ್ಟಿಗನ ವಿರುದ್ಧ ಕಿಡಿ ಕಾರಿದ್ದಾರೆ. "ದಕ್ಷಿಣದ ಈ ಚಿತ್ರ ಇಂಡಸ್ಟ್ರಿ ನನಗೆ ಮತ್ತು ಇನ್ನೂ ಅನೇಕರಿಗೆ ಅವರ ಕಲೆಯನ್ನು ಪ್ರದರ್ಶಿಸಲು ವೇದಿಕೆಯನ್ನು ನೀಡಿದೆ. ನನಗಿಂತಲೂ ಮೊದಲು ಈ ಕ್ಷೇತ್ರ ಅನೇಕ ಲೆಜೆಂಡ್​ಗಳನ್ನು ಸೃಷ್ಟಿಸಿದೆ. ಬಹುಶಃ ನಿಮಗೆ ಅವರ ಬಗ್ಗೆ ತಿಳಿದಿಲ್ಲ. ಏನೂ ಇಲ್ಲದ ನನ್ನ ಬದುಕನ್ನು ಇಂದು ಈ ಮಟ್ಟಕ್ಕೆ ತಂದಿದ್ದು ಇದೇ ಇಂಡಸ್ಟ್ರಿ. ಇಲ್ಲಿ ಕೆಲಸ ಮಾಡುವ ಸಾವಿರಾರು ಜನರಿಗೆ ಇದು ಜೀವನ." ಎಂದು ಹೇಳಿದ್ದಾರೆ.

ಅದಾದ ನಂತರ ಚೇತನ್​ ಅವರ ಮಾತಿಗೂ ಪ್ರತಿಕ್ರಿಯಿಸಿರುವ ರಕ್ಷಿತ್ ಶೆಟ್ಟಿ, "ಚೇತನ್ ಅಹಿಂಸಾ ಅವರೇ, ನೀವು ಮಾಡುವ ಕೆಲಸದ ಬಗ್ಗೆ ನಮಗೆ ಮೆಚ್ಚುಗೆಯಿದೆ. ಆದರೆ ನೀವು, ನಿಮ್ಮ ಮಾನಸಿಕ ಜಾಗವನ್ನು ನೀವು ಸ್ವಚ್ಛ ಮಾಡಿಕೊಳ್ಳಬೇಕು. ಕೆಟ್ಟದ್ದನ್ನು ಬಿತ್ತಿದ ಕಡೆ ಕೆಡುಕು ಬೆಳೆಯುತ್ತದೆ" ಎಂದು ಟ್ವೀಟ್ ಮೂಲಕ ಬುದ್ಧಿ ಮಾತು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net