'ರಾಕ್ಷಸರು' ಹಿಂದೆ ಬಿದ್ದ ಸಾಯಿಕುಮಾರ್​; ಆಗಸ್ಟ್​ನಲ್ಲಿ ಬಿಡುಗಡೆ

Rakshasaru (2)
Published on

ಬೆಂಗಳೂರು: ಪೊಲೀಸ್​ ಚಿತ್ರಗಳೆಂದರೆ ಅಲ್ಲಿ ಸಾಯಿಕುಮಾರ್​ ಇರಬೇಕು ಎಂಬ ಅಲಿಖಿತ ನಿಯಮ ಒಂದು ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿ ಇತ್ತು. ಅದಕ್ಕೆ ಕಾರಣ, ಸಾಯಿಕುಮಾರ್​ ಹಲವು ಪೊಲೀಸ್​ ಚಿತ್ರಗಳಲ್ಲಿ ನಟಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಬೇರೆಬೇರೆ ಪಾತ್ರಗಳತ್ತ ಗಮನಹರಿಸಿದ್ದ ಸಾಯಿಕುಮಾರ್​, ಈಗ ಪುನಃ ಪೊಲೀಸ್​ ಪಾತ್ರದಲ್ಲಿ ಕಾಣಿಸಿಕೊಂಸಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸಿಂಹಾದ್ರಿ ಪ್ರೊಡಕ್ಷನ್ಸ್ ಮೂಲಕ ಹಲವು ಚಿತ್ರಗಳನ್ನು ನಿರ್ಮಿಸಿರುವ ರಮೇಶ್ ಕಶ್ಯಪ್ ನಿರ್ಮಿಸಿರುವ 'ರಾಕ್ಷಸರು' ಎಂಬ ಚಿತ್ರವನ್ನು ನಿರ್ಮಿಸಿದ್ದು, ಈ ಚಿತ್ರದಲ್ಲಿ ರಾಕ್ಷಸರನ್ನು ಬೇಟೆ ಆಡುವ ಪಾತ್ರ ಮಾಡಿದ್ದಾರೆ. ಚಿತ್ರವು ಆಗಸ್ಟ್​ನಲ್ಲಿ ದೇಶದಾದ್ಯಂತ ತೆರೆ ಕಾಣುತ್ತಿದ್ದು, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸತತವಾಗಿ ಬಿಡುಗಡೆಯಾಗುತ್ತಿದೆ.

ಇದೊಂದು ಕ್ರೈಮ್ ಥ್ರಿಲ್ಲರ್ ಚಿತ್ರ. ಐದು ಜನ ಕ್ರಮಿನಲ್​ಗಳು ಮಾಡಬಾರದ ದುಷ್ಕೃತ್ಯಗಳನ್ನು ಮಾಡಿ ತಲೆ ಮರಸಿಕೊಂಡಿರುತ್ತಾರೆ. ಇವರನ್ನು ಪೊಲೀಸರು ಹೇಗೆ ಹುಡುಕುತ್ತಾರೆ? ಎಂಬುದೇ ಕಥಾಹಂದರ. ದಂಡುಪಾಳ್ಯದ ಕ್ರಿಮಿನಲ್​ಗಳನ್ನು ಮೀರಿಸುವ ಕ್ರಿಮಿನಲ್​ಗಳು ಈ 'ರಾಕ್ಷಸರು'. ರಜತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ಚಿತ್ರ.

ಚಿತ್ರದಲ್ಲಿ ಕ್ರೈಮ್​ ಹೇರಳವಾಗಿದ್ದರಿಂದ ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ಕಟ್​ಗಳ ಜತೆಗೆ 'ಎ' ಪ್ರಮಾಣ ಪತ್ರ ನೀಡಿ, ಬಿಡುಗಡೆಗೆ ಒಪ್ಪಿಗೆ ನೀಡಿದೆ. ಚಿತ್ರವನ್ನು ಆಗಸ್ಟ್​ ಎರಡನೇ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ತೀರ್ಮಾನಿಸಿರುವ ಚಿತ್ರತಂಡದವರು, ಈ ಚಿತ್ರವನ್ನು ಆರಕ್ಷಕರಿಗೆ ಅರ್ಪಿಸಲು ನಿರ್ಧರಿಸಿದ್ದಾರೆ.

'ರಾಕ್ಷಸರು' ಚಿತ್ರದಲ್ಲಿ 'ಡೈಲಾಗ್ ಕಿಂಗ್' ಸಾಯಿಕುಮಾರ್, ರಾಜಶೇಖರ್, ನಾಜರ್, ಸುಮನ್, ಕಿರಣ್ ಸುನೀಲ್, ತ್ರಿವೇಣಿ, ಅವಿನಾಶ್, ನೀರಜ್ ಯಾದವ್, ಮುಂತಾದವರು ನಟಿಸಿದ್ದು, ಎರಡು ಹಾಡುಗಳಿಗೆ ಎಮಿಲ್ ಸಂಗೀತ ಸಂಯೋಜಿಸಿದ್ದಾರೆ. ರಾಜಶೇಖರ್ ಸಂಭಾಷಣೆ, ಜನಾರ್ದನ ಬಾಬು ಛಾಯಾಗ್ರಹಣ, ಮತ್ತು ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net