More

    ಕೋಟಿವೀರರ ಕಥೆ! ಸ್ಟಾರ್​ಗಳ ಸಂಭಾವನೆ

    ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಎಂದರೆ ರಜನಿಕಾಂತ್ ಎಂಬ ಮಾತಿತ್ತು. ಆದರೆ, ಇಂದು ಅವರನ್ನು ಮೀರಿಸಿದ ಹಲವು ನಟರಿದ್ದಾರೆ. ಅವರು ಪಡೆಯುತ್ತಿದ್ದ ಸಂಭಾವನೆಯ ದುಪ್ಪಟ್ಟು ಪಡೆಯುವವರಿದ್ದಾರೆ. ಈ ಸಾಲಿನಲ್ಲಿ ಕನ್ನಡಿಗ ಯಶ್ ಸಹ ಇರುವುದು ವಿಶೇಷ …

    |ಚೇತನ್ ನಾಡಿಗೇರ್ ಬೆಂಗಳೂರು

    ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ‘ಬಿಗ್ ಬಾಸ್​ನ 16ನೇ ಸೀಸನ್ ಬಗ್ಗೆ ಜೋರು ಚರ್ಚೆಯಾಗುತ್ತಿದೆ. ಪ್ರಮುಖವಾಗಿ, ಈ ಬಾರಿ ಯಾರೆಲ್ಲ ಭಾಗವಹಿಸುತ್ತಿದ್ದಾರೆ? ಹೊಸತನ ಏನಿರಲಿದೆ? ಎಂಬ ವಿಷಯಗಳಿಗಿಂತ ಸಲ್ಮಾನ್ ಖಾನ್ ಎಷ್ಟು ಸಂಭಾವನೆ ಪಡೆಯಬಹುದು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಮೂಲಗಳ ಪ್ರಕಾರ, ಈ ಬಾರಿ ಸಲ್ಮಾನ್ ಪಡೆಯುತ್ತಿರುವ ಸಂಭಾವನೆ 1000 ಕೋಟಿ ರೂ. ಎಂದು ಹೇಳಲಾಗುತ್ತಿದೆ.

    ಆಶ್ಚರ್ಯವಾಗಬಹುದು. ಆದರೂ ಇದು ವಾಸ್ತವ. ‘ಬಿಗ್ ಬಾಸ್’ನ 15ನೇ ಸೀಸನ್ ನಡೆಸಿಕೊಡುವುದಕ್ಕೆ ಸಲ್ಮಾನ್ ಒಟ್ಟಾರೆ 350 ಕೋಟಿ ರೂ. ಸಂಭಾವನೆ ಪಡೆದಿದ್ದರಂತೆ. ಆದರೆ, ಈ ಬಾರಿ ಕಾರ್ಯಕ್ರಮ ನಡೆಸಿಕೊಡಬೇಕಿದ್ದರೆ, ಸಂಭಾವನೆ ಮೂರು ಪಟ್ಟು ಹೆಚ್ಚು ಮಾಡಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದಾರಂತೆ. ಒಂದು ಪಕ್ಷ ಚಾನಲ್​ನವರು ಇದಕ್ಕೆ ಒಪ್ಪಿದರೆ, ‘ಬಿಗ್ ಬಾಸ್’ನ 16ನೇ ಸೀಸನ್​ಗೆ ಸಲ್ಮಾನ್ ಖಾನ್ 1000 ಕೋಟಿ ರೂ. ಪಡೆಯಲಿದ್ದಾರಂತೆ.

    ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ: ಸಾಮಾನ್ಯವಾಗಿ ನಟ-ನಟಿಯರು ಸಹ ತಾವು ಪಡೆಯುವ ಸಂಭಾವನೆಯ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಹಾಗೆಯೇ, ನಿರ್ವಪಕರು ಸಹ ಎಷ್ಟು ಕೊಟ್ಟೆವೆಂದು ಹೇಳಿಕೊಳ್ಳುವುದಿಲ್ಲ. ಆದರೂ ಈ ತರಹದ ಸುದ್ದಿಗಳು ಆಗಾಗ ಕೇಳಿಬರುತ್ತಲೇ ಇರುತ್ತದೆ. ಹಾಗಂತ ಇದು ಸುಳ್ಳು ಎಂದು ಹೇಳುವುದು ಸಹ ಕಷ್ಟ. ಏಕೆಂದರೆ, ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಸಲ್ಮಾನ್ ಖಾನ್ ಮೂರು ಪಟ್ಟು ದುಡ್ಡು ಕೇಳಿರಬಹುದು. ಆದರೆ, ಕಳೆದ ಬಾರಿಗಿಂತ ಈ ಬಾರಿ ಖಂಡಿತಾ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಏಕೆಂದರೆ, ಕಳೆದ ಸೀಸನ್​ಗಳು ಎಷ್ಟು ಜನಪ್ರಿಯವಾಗಿದ್ದವು ಎಂದು ಅವರಿಗೆ ಚೆನ್ನಾಗಿ ಗೊತ್ತಿದೆ. ಈ ರಿಯಾಲಿಟಿ ಶೋ ಜನಪ್ರಿಯವಾಗುವುದಕ್ಕೆ ಸಲ್ಮಾನ್ ಕೊಡುಗೆ ದೊಡ್ಡದಿದೆ. ಈ ಹಿನ್ನೆಲೆಯಲ್ಲಿ ಅವರು ಕೇಳಿದಷ್ಟು ಸಂಭಾವನೆ ಕೊಡುವ ಅನಿವಾರ್ಯತೆ ಕಾರ್ಯಕ್ರಮದ ನಿರ್ವಪಕರಿಗೆ ಇರುತ್ತದೆ.

    ಒಂದೇ ಚಿತ್ರಕ್ಕೆ ಎರಡು ಪಟ್ಟು ಏರಿಕೆ: ಇದು ಬರೀ ಸಲ್ಮಾನ್ ಖಾನ್ ವಿಷಯವಷ್ಟೇ ಅಲ್ಲ, ಬಹಳಷ್ಟು ನಟ-ನಟಿಯರು ಸುದ್ದಿಯಲ್ಲಿರುವುದು ಅವರು ಮಾಡುವ ಚಿತ್ರದಿಂದಲ್ಲ, ಬದಲಿಗೆ ಸಂಭಾವನೆಯಿಂದ ಎಂದರೆ ಆಶ್ಚರ್ಯವಾಗಬಹುದು. ಒಂದು ಕಾಲವಿತ್ತು. ನಟ-ನಟಿಯರು ವರ್ಷಕ್ಕೊಮ್ಮೆ ಸಂಭಾವನೆಯನ್ನು ಏರಿಸುತ್ತಿದ್ದರು. ಈಗ ಹಾಗಲ್ಲ, ಚಿತ್ರದಿಂದ ಚಿತ್ರಕ್ಕೆ ಸಂಭಾವನೆ ಹೆಚ್ಚುತ್ತದೆ. ‘ಪುಷ್ಪ 1’ ಚಿತ್ರದಲ್ಲಿ ನಟಿಸುವುದಕ್ಕೆ ಅಲ್ಲು ಅರ್ಜುನ್, 40-45 ಕೋಟಿ ಪಡೆದಿದ್ದರಂತೆ. ಚಿತ್ರ ಹಿಟ್ ಆಗಿದ್ದೇ ಆಗಿದ್ದು, ಸದ್ಯದಲ್ಲೇ ಸೆಟ್ಟೇರಲಿರುವ ‘ಪುಷ್ಪ 2’ ಚಿತ್ರಕ್ಕೆ ಅವರು ಸಂಭಾವನೆಯನ್ನು ಎರಡು ಪಟ್ಟು ಏರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದರೆ, ‘ಪುಷ್ಪ 2’ಗೆ ಅಲ್ಲು ಅರ್ಜುನ್ ಪಡೆಯಲಿರುವ ಸಂಭಾವನೆ 90ರಿಂದ 100 ಕೋಟಿಯಷ್ಟಾಗಲಿದೆ. ಮೊದಲ ಚಿತ್ರ ಸೂಪರ್ ಹಿಟ್ ಆಗಿರುವುದರಿಂದ ಮತ್ತು ಎರಡನೆಯ ಭಾಗದ ಬಿಸಿನೆಸ್ ದೊಡ್ಡ ಮಟ್ಟದಲ್ಲಿ ಆಗುವ ನಿರೀಕ್ಷೆಗಳಿರುವುದರಿಂದ, ನಿರ್ವಪಕರು ಸಹ ಅರ್ಜುನ್ ಕೇಳಿದ ಸಂಭಾವನೆಯನ್ನು ಕೊಡುವುದಕ್ಕೆ ಒಪ್ಪಿಕೊಂಡಿದ್ದಾರಂತೆ.

    ಲಾಭದಲ್ಲಿ ಒಂದು ಭಾಗ: ಇಲ್ಲಿ ಎಲ್ಲರೂ ನೇರವಾಗಿ ಇಷ್ಟೇ ಪಡೆಯುತ್ತಾರೆ ಎಂದು ಹೇಳುವುದು ಕಷ್ಟ. ಕೆಲವರು ಸಂಭಾವನೆ ಕಡಿಮೆ ಪಡೆಯಬಹುದು. ಆದರೆ, ಲಾಭದಲ್ಲಿ ಒಂದಂಶವನ್ನು ಪಡೆಯುತ್ತಾರೆ ಅಥವಾ ಸ್ಯಾಟಿಲೈಟ್ ಹಾಗೂ ಡಿಜಿಟಲ್ ಹಕ್ಕುಗಳಿಂದ ಬಂದ ಹಣವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇನ್ನೂ, ಕೆಲವರು ನಿರ್ವಣದಲ್ಲೂ ಪಾಲುದಾರಿಕೆ ಹೊಂದಿರುತ್ತಾರೆ. ಅವರು ಪಡೆಯುವ ಸಂಭಾವನೆ ಕಡಿಮೆ ಇದ್ದರೂ, ಲಾಭ ಬಂದರೆ ದೊಡ್ಡ ಮಟ್ಟದಲ್ಲಿ ಬರುತ್ತದೆ.

    ಬಜೆಟ್​ನಲ್ಲಿ ಅರ್ಧ ಭಾಗ: ಇಂದು ಪರಿಸ್ಥಿತಿ ಹೇಗಾಗಿದೆ ಎಂದರೆ, ಒಂದು ಚಿತ್ರದ ಬಜೆಟ್​ನಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಕಲಾವಿದರು ಮತ್ತು ತಂತ್ರಜ್ಞರ ಸಂಭಾವನೆಗೆ ಮೀಸಲಿಡುವಂತಾಗಿದೆ. ಅಕ್ಷಯ್ ಕುಮಾರ್ ಚಿತ್ರಗಳಿಗೆ 200 ಕೋಟಿ ರೂ. ಬಜೆಟ್ ಬೇಕಾದರೆ, ಅದರಲ್ಲರ್ಧ ಹಣ ಅವರ ಸಂಭಾವನೆಗೆ ಎತ್ತಿಡಬೇಕಾಗುತ್ತಿದೆ. ‘ಆರ್​ಆರ್​ಆರ್’ ಚಿತ್ರದ ಬಜೆಟ್ 400 ಕೋಟಿ ಎಂದು ಹೇಳಲಾಗಿತ್ತು. ಇದರಲ್ಲಿ ಕಲಾವಿದರು ಮತ್ತು ತಂತ್ರಜ್ಞರ ಸಂಭಾವನೆಯೇ ಅರ್ಧದಷ್ಟಾಗಿತ್ತು. ಇಂದು ಚಿತ್ರರಂಗ ಬರೀ ಚಿತ್ರಮಂದಿರಗಳನ್ನು ಮತ್ತು ದುಡ್ಡು ಕೊಟ್ಟು ಟಿಕೆಟ್ ಪಡೆದು ಚಿತ್ರ ನೋಡುವ ಪ್ರೇಕ್ಷಕರನ್ನು ಮಾತ್ರ ನಂಬಿಲ್ಲ. ಈಗ ಹಲವು ಮೂಲಗಳಿದ್ದು, ಡಬ್ಬಿಂಗ್, ಓಟಿಟಿ, ಸ್ಯಾಟಲೈಟ್ ಸೇರಿದಂತೆ ಹಲವು ವೇದಿಕೆಗಳಿಂದ ದುಡ್ಡು ಹರಿದು ಬರುತ್ತಿದೆ. ಒಂದು ಚಿತ್ರ ಗೆದ್ದರೆ ಅಥವಾ ಒಂದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾದರೆ, ಆಗ ವ್ಯಾಪಾರ ಸಹ ಜೋರಾಗಿ ನಡೆಯುತ್ತಿದೆ. ಒಂದು ಚಿತ್ರದ ವ್ಯಾಪಾರ ನಾಯಕನ ಮಾರ್ಕೆಟ್ ಮೇಲೆ ನಿಂತಿರುವುದರಿಂದ, ಚಿತ್ರ ಗೆದ್ದರೆ ಹೀರೋಗಳು ಸಹ ಕೋಟಿ ವೀರರಾಗುತ್ತಾರೆ.

    ಕೋಟಿ ಕ್ಲಬ್​ನಲ್ಲಿ ಹಲವು ಸ್ಟಾರ್​ಗಳು: ಒಂದು ಕಾಲಕ್ಕೆ ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು ಎಂದರೆ ರಜನಿಕಾಂತ್ ಅವರನ್ನು ತೋರಿಸಲಾಗುತ್ತಿತ್ತು. ಆದರೆ, ಇಂದು ಕೋಟಿಕೋಟಿ ಸಂಭಾವನೆ ಪಡೆಯುವ ಸಾಕಷ್ಟು ಹೀರೋಗಳಿದ್ದಾರೆ. ಈ ಪೈಕಿ ಪ್ರಭಾಸ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್​ರಂತಹ ಸ್ಟಾರ್ ನಟರ ಸಂಭಾವನೆ 100 ಕೋಟಿ ರೂ. ದಾಟಿ ಒಂದೆರಡು ವರ್ಷಗಳೇ ಆಗಿವೆ. ಇನ್ನು, 50ರಿಂದ 100 ಕೋಟಿ ರೂ. ಕ್ಲಬ್​ನಲ್ಲಿ ಆಮೀರ್ ಖಾನ್, ಶಾರೂಖ್ ಖಾನ್, ವಿಜಯ್, ಹೃತಿಕ್ ರೋಶನ್, ಅಜಿತ್, ಜ್ಯೂನಿಯರ್ ಎನ್​ಟಿಆರ್, ಯಶ್, ಮಹೇಶ್ ಬಾಬು, ರಾಮಚರಣ್ ತೇಜ, ಪವನ್ ಕಲ್ಯಾಣ್ ಮುಂತಾದವರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts