ಗುಟ್ಟಾಗಿ 2ನೇ ಮದುವೆಯಾದ ರಾಖಿ ಸಾವಂತ್​ ಮಾಜಿ ಪತಿ ಆದಿಲ್! ಯಾರು ಈ ಸೋಮಿ ಖಾನ್?​

Adil Khan
Published on

ಮುಂಬೈ: ವಿವಾದಿತ ನಟಿ ರಾಖಿ ಸಾವಂತ್ ಮಾಜಿ ಪತಿ, ಮೈಸೂರು ಮೂಲದ ಆದಿಲ್​ ಖಾನ್​ ದುರಾನಿ, ಬಿಗ್​ಬಾಸ್​ ಸೀಸನ್​ 12ರ ಸ್ಪರ್ಧಿ ಸೋಮಿ ಖಾನ್​ ಎಂಬುವರನ್ನು ಮದುವೆಯಾಗಿರುವುದಾಗಿ ವರದಿಯಾಗಿದೆ. ಆದರೆ, ಈ ಬಗ್ಗೆ ಆದಿಲ್​ ಆಗಲಿ ಅಥವಾ ಸೋಮಿಯಾಗಲಿ ಖಚಿತಪಡಿಸಿಲ್ಲ.

ಸರಳ ಸಮಾರಂಭದಲ್ಲಿ ಆಪ್ತರ ಸಮ್ಮುಖದಲ್ಲಿ ನವಜೋಡಿ ನಿಖಾ ಆಗಿದ್ದು, ಈ ವಿಚಾರವನ್ನು ಗುಟ್ಟಾಗಿ ಇಡಲು ಇಚ್ಛಿಸಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಆದಿಲ್​ ಖಾನ್​ ಅನೇಕ ವಿಚಾರಗಳಿಗೆ ಸುದ್ದಿಯಾಗಿರುವುದರಿಂದ ಮದುವೆ ಸಂಗತಿಯನ್ನು ಸದ್ಯ ಬಹಿರಂಪಡಿಸುವುದು ಬೇಡ ಎಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮಾರ್ಚ್​ 2ರಂದು ರಾಜಸ್ಥಾನದ ಜೈಪುರದಲ್ಲಿ ಆದಿಲ್​ ಮದುವೆ ಆಗಿದ್ದಾರೆ. ಸೋಮಿ ಖಾನ್​, ಕಲಾವಿದೆ ಸಬಾ ಖಾನ್​ ಅವರ ಸಹೋದರಿ. ಸಲ್ಮಾನ್​ ಖಾನ್​ ನಡೆಸಿಕೊಡುವ ವಿವಾದಿತ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 12ರಲ್ಲಿ ಇಬ್ಬರು ಒಟ್ಟಿಗೆ ಸ್ಪರ್ಧಿಸಿದ್ದರು. ಇಬ್ಬರು ಜೈಪುರ ಮೂಲದವರಾಗಿದ್ದು, ಮುಂಬೈನಲ್ಲಿ ನೆಲೆಸಿದ್ದಾರೆ. ಇಬ್ಬರು ಕೂಡ ನಟಿಯರು. ಮ್ಯೂಸಿಕ್​ ಆಲ್ಬಂ ಸೇರಿದಂತೆ ಕೆಲವು ಪ್ರಾಜೆಕ್ಟ್​ಗಳಲ್ಲಿ ಭಾಗವಾಗಿದ್ದಾರೆ.

ಸಿನಿಮಾ ಲೋಕದ ಡ್ರಾಮಾ ಕ್ವೀನ್​ ಎಂದೇ ಖ್ಯಾತಿ ಪಡೆದಿರುವ ಹಾಗೂ ಸದಾ ವಿವಾದಗಳಿಂದಲೇ ಸುದ್ದಿಯಾಗುವ ಬಾಲಿವುಡ್​ ನಟಿ ರಾಖಿ ಸಾವಂತ್, ಕಳೆದ ವರ್ಷ ತಮ್ಮ ಮದುವೆ ವಿಚಾರದಿಂದಲೇ ಬಹಳ ಸುದ್ದಿಯಾದರು. ಆದಿಲ್​ ದುರ್ರಾನಿ ಎಂಬುವರನ್ನು ಮದುವೆಯಾಗಿದ್ದ ರಾಖಿ ಸಾವಂತ್​ ಕೆಲವೇ ತಿಂಗಳುಗಳಲ್ಲಿ ಆತನಿಂದ ದೂರವಾದರು. ಅಲ್ಲದೆ, ಆದಿಲ್​ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದರು.

ಆದಿಲ್​ ನನಗೆ ಮೋಸ ಮಾಡಿದ್ದಾನೆ. ನನ್ನನ್ನು ಬಳಸಿಕೊಂಡು ಆತ ಬಾಲಿವುಡ್​ ಪ್ರವೇಶಿಸಲು ಬಯಸುತ್ತಿದ್ದಾನೆ. ಆದಿಲ್​ ಓರ್ವ ಸುಳ್ಳುಗಾರ. ಒಂದು ಹುಡುಗಿಯನ್ನು ಮೊಬೈಲ್​ನಲ್ಲಿ ಬ್ಲಾಕ್​ ಮಾಡುತ್ತೇನೆ ಅಂತಾ ಕುರಾನ್​ ಮೇಲೆ ಆಣೆ ಮಾಡಿದ್ದ. ಆದರೆ, ಅದರಂತೆ ಆತ ನಡೆದುಕೊಳ್ಳಲಿಲ್ಲ. ಇದೀಗ ಆ ಹುಡುಗಿ ಆತನನ್ನು ಬ್ಲಾಕ್​ಮೇಲ್​ ಮಾಡುತ್ತಿದ್ದಾಳೆ. ಅವಳ ಬಳಿ ಆದಿಲ್​ ಕುರಿತ ಕೆಲವು ಕೊಳಕು ವಿಡಿಯೋ ಸಾಕ್ಷಿಗಳು ಇವೆ. ನನ್ನನ್ನು ಸಾಯಿಸಲು ಸುಪಾರಿ ಕೂಡ ನೀಡಿದ್ದಾನೆ ಎಂದೆಲ್ಲ ರಾಖಿ ಆರೋಪ ಮಾಡಿದ್ದಳು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net