

ಸೂಪರ್ಸ್ಟಾರ್ ರಜನಿಕಾಂತ್ ಅವರ 168ನೇ ಸಿನಿಮಾಗೆ ‘ಅಣ್ಣಾದೆ’ ಎಂಬ ಟೈಟಲ್ ಫಿಕ್ಸ್ ಆಗಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ‘ಸನ್ ಪಿಕ್ಚರ್ಸ್’ ನಿರ್ವಿುಸುತ್ತಿರುವ ಈ ಚಿತ್ರದ ಶೀರ್ಷಿಕೆಯನ್ನು ಮೋಷನ್ ಪೋಸ್ಟರ್ ಮೂಲಕ ರಿಲೀಸ್ ಮಾಡಲಾಗಿದೆ. ‘ವಿಶ್ವಾಸಂ’, ‘ವೀರಂ’, ‘ವೇದಾಳಂ’ ಚಿತ್ರದ ಯಶಸ್ವಿ ನಿರ್ದೇಶಕ ಸಿರುಥೈ ಸಿವಾ ‘ಅಣ್ಣಾತೆ’ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಸಿವ ಮತ್ತು ರಜನಿ ಕಾಂಬಿನೇಷನ್ನಿಂದಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಈ ಸಿನಿಮಾದ ಟೈಟಲ್ ಕೂಡ ವಿಶಿಷ್ಟವಾಗಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಯನತಾರಾ, ಖುಷ್ಬೂ, ಕೀರ್ತಿ ಸುರೇಶ್, ಪ್ರಕಾಶ್ ರಾಜ್, ಮೀನಾ, ಸೂರಿ ಸೇರಿ ಬಹುತಾರಾಗಣವನ್ನು ಈ ಚಿತ್ರ ಹೊಂದಿದೆ. ಹಿರಿಯರಿಗೆ ಅಥವಾ ಪ್ರಭಾವಿ ವ್ಯಕ್ತಿಗಳಿಗೆ ತಮಿಳಿನಲ್ಲಿ ‘ಅಣ್ಣಾದೆ’ ಎಂದು ಸಂಬೋಧಿಸುತ್ತಾರೆ.
ಟೈಟಲ್ ನೋಡಿದರೆ ಈ ಚಿತ್ರದಲ್ಲಿ ರಜನಿ ಡಾನ್ ಅಥವಾ ಪ್ರಭಾವಿ ವ್ಯಕ್ತಿಯಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಈ ಚಿತ್ರದಲ್ಲಿ ರಜನಿಕಾಂತ್ ಪುತ್ರಿಯಾಗಿ ನಟಿಸುತ್ತಾರೆ ಎಂಬ ಸುದ್ದಿಯೂ ಹಬ್ಬಿದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಡಿ ಇಮಾನ್ ಮೊದಲ ಬಾರಿಗೆ ಸೂಪರ್ ಸ್ಟಾರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಸಿವಾ ನಿರ್ದೇಶನದ ‘ವಿಶ್ವಾಸಂ’, ರಜನಿಕಾಂತ್ ನಟನೆಯ ‘ಪೇಟಾ’ ಒಂದೇ ದಿನ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಷ್ ಆಗಿತ್ತು. ಈಗ ರಜನಿಕಾಂತ್ಗೆ ಅದೇ ಸಿವಾ ನಿರ್ದೇಶನ ಮಾಡುತ್ತಿದ್ದಾರೆ.