

ಚೆನ್ನೈ: 'ಜೈಲರ್' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಕಾಲಿವುಡ್ನ ಸೂಪರ್ ಸ್ಟಾರ್ ರಜನಿಕಾಂತ್, ಆ ಚಿತ್ರ ಮುಗಿಯುವುದಕ್ಕಿಂತ ಮೊದಲೇ ಇನ್ನೊಂದು ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ವಿಶೇಷವೆಂದರೆ, ಈ ಚಿತ್ರವನ್ನು 'ಜೈ ಭೀಮ್' ನಿರ್ದೇಶಿಸಿದ್ದ ಟಿ.ಜೆ. ಜ್ನಾನವೇಲ್ ನಿರ್ದೇಶನ ಮಾಡುತ್ತಿದ್ದಾರೆ.
ಅಂದಹಾಗೆ, ಈ ಚಿತ್ರವನ್ನು ನಿರ್ಮಿಸುತ್ತಿರುವುದು ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯ ಅಲಿರಾಜ ಸುಭಾಸ್ಕರನ್. ಈ ಹಿಂದೆ, ರಜನಿಕಾಂತ್ ಅಭಿನಯದಲ್ಲಿ '2.0' ಮತ್ತು 'ದರ್ಬಾರ್' ಚಿತ್ರಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯು, ಈ ಚಿತ್ರವನ್ನು ನಿರ್ಮಿಸುತ್ತಿದ್ದೆ. ಈ ಚಿತ್ರಕ್ಕೆ ಸದ್ಯಕ್ಕೆ 'ಥಲೈವರ್ 170' ಎಂದು ತಾತ್ಕಾಲಿಕವಾಗಿ ಕರೆಯಲಾಗುತ್ತಿದ್ದು, ನಿಜವಾದ ಹೆಸರನ್ನು ಸದ್ಯದಲ್ಲೇ ಘೋಷಿಸಲಾಗುವುದು.
'ಥಲೈವರ್ 170' ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ನಿರ್ದೇಶನ ಮಾಡುತ್ತಿದ್ದಾರೆ. ಮಿಕ್ಕಂತೆ ಉಳಿದ ಕಲಾವಿದರು ಮತ್ತು ತಂತ್ರಜ್ನರ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. 2024ರಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆಯಂತೆ.
ಇದನ್ನೂ ಓದಿ: ರೈತರ ಸಮಸ್ಯೆಗಳ ಸರಮಾಲೆ: ವಿಜಯವಾಣಿ ಸಿನಿಮಾ ವಿಮರ್ಶೆ
ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರೀಕರಣ ಮುಗಿಯುತ್ತಾ ಬಂದಿದ್ದು, ಈ ಚಿತ್ರದಲ್ಲಿ ತಮನ್ನಾ ಭಾಟಿಯಾ, ಶಿವರಾಜಕುಮಾರ್, ಮೋಹನ್ ಲಾಲ್, ಜಾಕಿ ಶ್ರಾಫ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.