'ಅಣ್ಣಾತ್ತೆ' ಚಿತ್ರತಂಡದ ನಾಲ್ವರಿಗೆ ಪಾಸಿಟಿವ್​; ಚಿತ್ರೀಕರಣ ಸ್ಥಗಿತ

Rajanikanth - Final
Published on

ಹೈದರಾಬಾದ್​: 'ಅಣ್ಣಾತ್ತೆ' ಚಿತ್ರವನ್ನು ಆದಷ್ಟು ಬೇಗ ಮುಗಿಸಬೇಕು ಎಂಬ ರಜನಿಕಾಂತ್​ ಅವರ ಯೋಚನೆ ಮತ್ತೊಮ್ಮೆ ತಲೆ ಕೆಳಗಾಗಿದೆ. ಚಿತ್ರತಂಡದವರಲ್ಲಿ ನಾಲ್ವರಿಗೆ ಕರೊನಾ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಚಿತ್ರೀಕರಣ ಯಾವಾಗ ಮತ್ತೆ ಶುರುವಾಗುತ್ತದೆ ಎಂಬ ವಿಷಯ ಇನ್ನಷ್ಟೇ ಗೊತ್ತಾಗಬೇಕಿದೆ.

ರಜನಿಕಾಂತ್​ ಅವರು 'ಅಣ್ಣಾತ್ತೆ' ಚಿತ್ರವನ್ನು ಜನವರಿ 12ರೊಳಗೆ ಮುಗಿಸಬೇಕು ಎಂದು ಪ್ಲಾನ್​ ಹಾಕಿಕೊಂಡಿದ್ದರು. ಅದಕ್ಕಾಗಿ ಕಳೆದ ಕೆಲವು ದಿನಗಳಿಂದ, ಪ್ರತಿದಿನ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಚಿತ್ರೀಕರಣ ಸಹ ಸಾಕಷ್ಟು ಮುಗಿದಿತ್ತು. ಎಲ್ಲಾ ಚೆನ್ನಾಗಿ ನಡೆಯುತ್ತಿರುವಾಗ, ಚಿತ್ರತಂಡದ ನಾಲ್ವರಿಗೆ ಕರೊನಾ ಪಾಸಿಟಿವ್​ ಬಂದಿರುವುದರಿಂದ ಚಿತ್ರೀಕರಣ ಅನಿವಾರ್ಯವಾಗಿ ಮುಂದಕ್ಕೆ ಹೋಗಿದೆ.

ಇಷ್ಟಕ್ಕೂ ರಜನಿಕಾಂತ್​ ಅವರಿಗೆ ತುರ್ತಾಗಿ ಚಿತ್ರ ಮುಗಿಸುವುದಕ್ಕೂ ಒಂದು ಕಾರಣವಿದೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆಗಳು ನಡೆಯಲಿದ್ದು, ಅದರಲ್ಲಿ ರಜನಿಕಾಂತ್​ ಅವರ ರಾಜಕೀಯ ಪಕ್ಷ ಸಹ ಸ್ಪರ್ಧಿಸಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಒಪ್ಪಿಕೊಂಡಿರುವ 'ಅಣ್ಣಾತ್ತೆ' ಚಿತ್ರದ ಚಿತ್ರೀಕರಣವನ್ನು ಆದಷ್ಟು ಬೇಗ ಮುಗಿಸುವುದು ಅವರ ಯೋಚನೆ. ಆದರೆ, ಇದೀಗ ಚಿತ್ರ ಮುಗಿಯುವುದು ಇನ್ನಷ್ಟು ತಡವಾಗಲಿದೆ.

'ಅಣ್ಣಾತ್ತೆ' ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ನಯನತಾರಾ, ಖುಷ್ಬೂ, ಮೀನಾ, ಕೀರ್ತಿ ಸುರೇಶ್​ ಮುಂತಾದವರು ನಟಿಸುತ್ತಿದ್ದು, ಶಿವಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net