

ಬೆಂಗಳೂರು: ನಿರ್ಮಾಪಕ ಕೆ. ಮಂಜು ಅವರ ಮಗ ಶ್ರೇಯಸ್, ಇತ್ತೀಚೆಗಷ್ಟೇ ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಯಾಕೆ? ಏನು? ಎಂಬ ರಹಸ್ಯಗಳನ್ನು ಬಚ್ಚಿಟ್ಟಿದ್ದ ಅವರು, ಹೊಸ ಫೋಟೋಗಳ ಕುರಿತು ಕೊನೆಗೂ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಪ್ರಮುಖವಾಗಿ ಈ ಫೋಟೋಶೂಟ್ ಮಾಡಿಸಿದ್ದು ಹೊಸ ಚಿತ್ರಕ್ಕಾಗಿ ಮತ್ತು ಈ ಚಿತ್ರ ಮಾರ್ಚ್ ಕೊನೆಗೆ ಅಥವಾ ಏಪ್ರಿಲ್ನಲ್ಲಿ ಶುರುವಾಗಲಿದೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಕಥೆ ಓಕೆ ಆಗಿದೆ. ಆದರೆ, ನಿರ್ದೇಶಕರ್ಯರು ಎಂಬುದು ಇನ್ನೂ ಪಕ್ಕಾ ಆಗಿಲ್ಲವಂತೆ. ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರ ನೇತೃತ್ವದಲ್ಲಿ ಈ ಚಿತ್ರ ತಯಾರಾಗುತ್ತಿದೆಯಂತೆ.
ಈ ಕುರಿತು 'ವಿಜಯವಾಣಿ' ಜತೆಗೆ ಮಾತನಾಡಿದ ಶ್ರೇಯಸ್, 'ನಾನು 'ವಿಷ್ಣುಪ್ರಿಯ' ಮಾಡುವಾಗಲೇ ಈ ಕಥೆ ಕೇಳಿ ಇಷ್ಟಪಟ್ಟಿದ್ದೆ. ಇದೊಂದು ರಾಮಕಾಮ್ ಆಗಿದ್ದು, ಬಹಳ ಸ್ಟೈಲಿಶ್ ಆಗಿರುತ್ತದೆ. ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರವಾಗಿದ್ದು, ಯಾವುದೇ ಸಂದೇಶವಿಲ್ಲ. ಸದ್ಯಕ್ಕೆ ಕೆಲಸಗಳು ನಡೆಯುತ್ತಿದ್ದು, ನಿರ್ದೇಶಕರ ಆಯ್ಕೆ ಆಗಿಲ್ಲ' ಎನ್ನುತ್ತಾರೆ ಶ್ರೇಯಸ್.
ಇನ್ನು, ಅದಕ್ಕೂ ಮುನ್ನ ಒಂದು ಚಿತ್ರದಲ್ಲಿ ಅವರು ನಟಿಸುವ ಸಾಧ್ಯತೆ ಇದ್ದು, ಇದು ಸಹ 'ವಿಷ್ಣುಪ್ರಿಯ' ತರಹ ದ್ವಿಭಾಷಾ ಚಿತ್ರವಂತೆ. ಕನ್ನಡ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: 2021ರ ಮೊದಲ ಚಿತ್ರವಾಗಿ ‘ರಾಜತಂತ್ರ’
ಈ ಮಧ್ಯೆ, 'ವಿಷ್ಣುಪ್ರಿಯ' ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಆದರೆ, ಚಿತ್ರಮಂದರಿಗಳಲ್ಲಿ ಶೇ 100ರಷ್ಟು ಹಾಜರಾತಿಗೆ ಅನುಮತಿ ಸಿಕ್ಕ ನಂತರವಷ್ಟೇ ಬಿಡುಗಡೆ ಮಾಡಲಾಗುತ್ತದಂತೆ. ಈ ಚಿತ್ರದಲ್ಲಿ ಶ್ರೇಯಸ್ಗೆ ಪ್ರಿಯಾ ವಾರಿಯರ್ ನಾಯಕಿಯಾಗಿ ನಟಿಸಿದ್ದು, ಮಲಯಾಳಂನ ಜನಪ್ರಿಯ ನಿರ್ದೇಶಕ ವಿ.ಕೆ. ಪ್ರಕಾಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.