

ಬೆಂಗಳೂರು: ಮೇಲೊಬ್ಬ ಮಾಯಾವಿ ಚಿತ್ರ ಅನೇಕ ಕಾರಣಗಳಿಂದ ಕನ್ನಡಿಗರಿಗೆ ವಿಶೇಷವೆನ್ನಬಹುದು. ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕರಾದ ಎಲ್.ಎನ್.ಶಾಸ್ತ್ರಿಯವರ ಕೊನೆಯ ಚಿತ್ರವದು. ಆ ಚಿತ್ರದಲ್ಲಿ ಗಾಯಕ ರಾಜೇಶ್ ಕೃಷ್ಣನ್ ʻರಾಣಿಜೇನು ರೂಪಾನೆ ಚಂದ..ʼ ಎನ್ನುವ ಹಾಡನ್ನು ಹಾಡಿದ್ದಾರೆ. ಆ ಹಾಡಿನ ಬಗ್ಗೆ ಹಾಗೂ ಎಲ್ ಎನ್ ಶಾಸ್ತ್ರಿ ಅವರ ಬಗ್ಗೆ ರಾಜೇಶ್ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಹಾಡು ಹಾಡುವ ಸಂದರ್ಭಕ್ಕೂ, ಈ ಸಂದರ್ಭಕ್ಕೂ ಸಾಕಷ್ಟು ಬದಲಾವಣೆಗಳೇ ಆಗಿ ಬಿಟ್ಟಿವೆ. ಮೇಲೊಬ್ಬ ಮಾಯಾವಿಯ ಆತ್ಮವಾಗಿದ್ದವರು ದೈಹಿಕವಾಗಿ ನಮ್ಮನ್ನಗಲಿದ್ದಾರೆ. ಶಾಸ್ತ್ರಿಯವರೇ ಒಬ್ಬ ಮಾಯಾವಿ ಎನ್ನುತ್ತ ತಮ್ಮ ಮತ್ತು ಶಾಸ್ತ್ರಿ ಅವರ ನಡುವಿನ ಸ್ನೇಹದ ಬಗ್ಗೆಯೂ ವಿವರಣೆ ನೀಡಿದ್ದಾರೆ. ಕನ್ನಡ ಚಿತ್ರರಂಗ ಕಳೆದುಕೊಂಡಿರುವ ಅದ್ಭುತ ಸಂಗೀತ ನಿರ್ದೇಶಕ ಅವರು ಎಂದು ಅವರ ಬಗ್ಗೆ ತಮ್ಮ ಮನಸ್ಸಿನ ಮಾತನ್ನು ಬಿಚ್ಚಿಟ್ಟಿದ್ದಾರೆ.
ಮೇಲೊಬ್ಬ ಮಾಯಾವಿ ಚಿತ್ರದಲ್ಲಿ ರಾಜೇಶ್ ಕೃಷ್ಣನ್ ಅವರು ಹಾಡಿರುವ ವಿಡಿಯೋ ಸಾಂಗ್ ಈಗಾಗಲೇ ರಿಲೀಸ್ ಆಗಿದೆ. ಚಕ್ರವರ್ತಿ ಚಂದ್ರಚೂಡ್ ಅವರ ಸಾಹಿತ್ಯ, ಎಲ್.ಎನ್ ಶಾಸ್ತ್ರಿಯವರ ಸಂಗೀತ ಹಾಡಿಗಿದೆ. ಮನದಾಳದ ಮಾತನ್ನು ಹಂಚಿಕೊಂಡಿರುವ ರಾಜೇಶ್ ಕೃಷ್ಣನ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.