

ಹೈದರಾಬಾದ್: ತಮಿಳು ನಟ ರಜನಿಕಾಂತ್ ಮತ್ತು ತೆಲುಗು ನಟ ಮೋಹನ್ ಬಾಬು ಆತ್ಮೀಯ ಸ್ನೇಹಿತರು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆಗಾಗ ಅವರಿಬ್ಬರೂ ಭೇಟಿಯಾಗುವುದು, ಜತೆಗೆ ಕಾಲ ಕಳೆಯುವುದು ಇವೆಲ್ಲವೂ ನಡೆಯುತ್ತಲೇ ಇರುತ್ತದೆ. ಅದೇ ರೀತಿ ಇತ್ತೀಚೆಗೆ, ಈ ಆಪ್ತಮಿತ್ರರು ಮತ್ತೊಮ್ಮೆ ಭೇಟಿ ಮಾಡಿ, ಜತೆಯಾಗಿ ಒಂದಿಷ್ಟು ಸಮಯ ಕಳೆದಿದ್ದಾರೆ.
ಏಪ್ರಿಲ್ ತಿಂಗಳ ಪೂರಾ ರಜನಿಕಾಂತ್ ತಮ್ಮ ಅಣ್ಣಾತ್ತೆ ಚಿತ್ರದ ಚಿತ್ರೀಕರಣಕ್ಕೆ ಹೈದರಾಬಾದ್ನಲ್ಲಿ ಬೀಡುಬಿಟ್ಟಿದ್ದರು. ಮೇ 13ರವರೆಗೂ ಅವರು ಹೈದರಾಬಾದ್ನಲ್ಲೇ ಇದ್ದು, ತಮ್ಮ ಕೆಲಸವನ್ನು ಮುಗಿಸಿಕೊಟ್ಟು ಬಂದಿದ್ದಾರೆ. ಅದಕ್ಕೂ ಮುನ್ನ ಅವರು ತಮ್ಮ ಆತ್ಮೀಯ ಗೆಳೆಯ ಮೋಹನ್ ಬಾಬು ಅವರ ಮನೆಗೂ ಹೋಗಿ, ಅಲ್ಲಿ ಎರಡು ದಿನಗಳ ಕಾಲ ತಂಗಿದ್ದರಂತೆ.
ಈಗ ಮೋಹನ್ ಬಾಬು ಅವರ ಮಗ ವಿಷ್ಣು ಮಂಚು, ಕೆಲವು ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ರಜನಿಕಾಂತ್ ಅವರು ತಮ್ಮ ಮನೆಗೆ ಬಂದ ಸಂದರ್ಭದಲ್ಲಿ ತೆಗೆದ ಕೆಲವು ಫೋಟೋಗಳು ಅವು. ಅದರಲ್ಲಿ ರಜನಿಕಾಂತ್ ಮತ್ತು ಮೋಹನ್ ಬಾಬು ಜತೆಗಿದ್ದು, ಅವರನ್ನು ಒರಿಜಿನಲ್ ಗ್ಯಾಂಗ್ಸ್ಟರ್ಗಳು ಎಂದು ಪ್ರೀತಿಯಿಂದ ಸಂಬೋಧಿಸಿದ್ದಾರೆ.
ಹೀಗೆ ಮೋಹನ್ ಬಾಬು ಅವರ ಹೈದರಾಬಾದ್ ಮನೆಯಲ್ಲಿ ಒಂದಿಷ್ಟು ಒಳ್ಳೆಯ ಸಮಯವನ್ನು ಕಳೆದ ರಜನಿಕಾಂತ್, ಅದಾದ ಮರುದಿನವೇ ಚೆನ್ನೈಗೆ ವಾಪಸ್ಸಾಗಿದ್ದಾರೆ. ಸದ್ಯ ಚೆನ್ನೈನಲ್ಲೇ ಇರುವ ರಜನಿಕಾಂತ್, ಕರೊನಾ ಎರಡನೇ ಅಲೆ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ, ಅಣ್ಣಾತ್ತೆ ಚಿತ್ರದ ಡಬ್ಬಿಂಗ್ನಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.