ಕರೊನಾ ಕಂಟಕ: ಸಿನಿಮಾ ಕಾರ್ಮಿಕರಿಗೆ 50 ಲಕ್ಷ ಕೊಟ್ರು ರಜನಿಕಾಂತ್

RAJANI KANT
Published on

ಕೆಲಸವಿಲ್ಲದೆ ತತ್ತರಿಸುತ್ತಿರುವ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ‘ಸೂಪರ್ ಸ್ಟಾರ್’ ರಜನಿಕಾಂತ್ ಅವರು ಫಿಲ್ಮ್ ಎಂಪ್ಲಾಯಿಸ್ ಫೆಡರೇಶನ್ ಆಫ್ ಸೌಥ್ ಇಂಡಿಯಾ ಎಂಬ ಕಾರ್ಮಿಕರ ಒಕ್ಕೂಟಕ್ಕೆ 50 ಲಕ್ಷ ದೇಣಿಗೆ ಕೊಟ್ಟಿದ್ದಾರೆ. ಇನ್ನು ನಟ ವಿಜಯ್ ಸೇತುಪತಿ ಸಹ ಕಾರ್ಮಿಕರ ಅನುಕೂಲಕ್ಕಾಗಿ 10 ಲಕ್ಷ ದೇಣಿಗೆಯನ್ನು ಕೊಟ್ಟಿದ್ದಾರೆ.

ಕರೊನಾದಿಂದಾಗಿ ಇಡೀ ಭಾರತೀಯ ಚಿತ್ರರಂಗವೇ ಸಂಪೂರ್ಣ ಶಟ್‌ಡೌನ್ ಆಗಿದೆ. ಇದರಿಂದ ಎಲ್ಲಾ ಭಾಷೆಯ ಚಿತ್ರರಂಗಗಳಲ್ಲಿ ಪ್ರತಿ ದಿನದ ಸಂಬಳವನ್ನೇ ನಂಬಿ ಬದುಕುತ್ತಿರುವ ಬಡ ಕಾರ್ಮಿಕರಿಗೆ ಸಾಕಷ್ಟು ಸಮಸ್ಯೆ ಆಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಭಾಷೆಯ ಚಿತ್ರರಂಗಗಳಲ್ಲೂ ಕಾರ್ಮಿಕರಿಗೆ ಫಂಡ್ ರೈಸ್ ಮಾಡುವ ಕೆಲಸ ಪ್ರಾರಂಭವಾಗಿದೆ. ತಮಿಳಿನಲ್ಲಿ ಫಿಲ್ಮ್ ಎಂಪ್ಲಾಯಿಸ್ ಫೆಡರೇಶನ್ ಆಫ್ ಸೌಥ್ ಇಂಡಿಯಾ ದೇಣಿಗೆ ಸಂಗ್ರಹಿಸುವ ಕೆಲಸ ಪ್ರಾರಂಭಿಸಿದ್ದು, ರಜನಿಕಾಂತ್ 50 ಲಕ್ಷ ಕೊಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ವಿಜಯ್ ಸೇತುಪತಿ ಸಹ 10 ಲಕ್ಷ ಕೊಟ್ಟು ಸೈ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಹಿರಿಯ ನಟ ಶಿವಕುಮಾರ್ ಮತ್ತು ಅವರ ಇಬ್ಬರು ಪುತ್ರರಾದ ಸೂರ್ಯ ಮತ್ತು ಕಾರ್ತಿಕೇಯನ್ ಜಂಟಿಯಾಗಿ 10 ಲಕ್ಷ ಕೊಟ್ಟಿದ್ದರು. ಪ್ರಕಾಶ್ ರೈ, ಪಾರ್ಥಿಬನ್ ಮತ್ತು ಮನೋಬಾಲ ಅವರು 25 ಕೆಜಿ ತೂಕದ 250, 150 ಮತ್ತು 10 ಅಕ್ಕಿ ಮೂಟೆ ವಿತರಿಸಿದ್ದರು. ಇನ್ನು ಇತರೆ ಕಲಾವಿದರು ಸಹ ತಮ್ಮ ಶಕ್ತಿಗನುಸಾರವಾಗಿ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ.

ಈ ವಿಷಯದಲ್ಲಿ ಕನ್ನಡ ಚಿತ್ರರಂಗ ಹಿಂದೆ ಬಿದ್ದಿಲ್ಲ. ಈಗಾಗಲೇ ‘ಲೂಸಿಯಾ’ ಪವನ್ ಸೇರಿದಂತೆ ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಸಿನಿಮಾ ಕಾರ್ಮಿಕರ ಸಲುವಾಗಿ ಫಂಡ್ ರೈಸ್ ಮಾಡಲು ಮುಂದಾಗಿದ್ದಾರೆ. ಕರ್ನಾಟಕ ಚಲನಚಿತ್ರ ಸಹಕಲಾವಿದರ, ಕಿರುತೆರೆ ಹಾಗೂ ಪ್ರತಿನಿಗಳ ಸಂಘ ಸಹ ಸೋಮವಾರ ರಾತ್ರಿ, ಸದಸ್ಯರಿಗೆ ಅಗತ್ಯವಿರುವ ಅಕ್ಕಿ, ಬೇಳೆ, ಎಣ್ಣೆ ಮುಂತಾದ ದವಸ ನೀಡುವುದರ ಜತೆಗೆ, 500 ರೂಗಳನ್ನು ನೀಡಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net