

ನ್ಯೂಯಾರ್ಕ್: ತಮ್ಮ 'ಆರ್.ಆರ್.ಆರ್' ಚಿತ್ರವನ್ನು ಜಗತ್ತಿನ ಮೂಲೆಮೂಲೆಗೆ ತಲುಪಿಸುವ ಜತೆಗೆ, ಮುಂದಿನ ವರ್ಷ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ದೊಡ್ಡ ಮಟ್ಟದಲ್ಲಿ ತಮ್ಮ ಚಿತ್ರಕ್ಕೆ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ನಿರ್ದೇಶಕ ಎಸ್.ಎಸ್. ರಾಜಮೌಳಿ ಓಡಾಡುತ್ತಿದ್ದಾರೆ. ಈ ಮಧ್ಯೆ, ಅವರಿಗೆ ಪ್ರತಿಷ್ಠಿತ ನ್ಯೂಯಾರ್ಕ್ ಫಿಲಂ ಕ್ರಿಟಿಕ್ಸ್ ಸರ್ಕಲ್ನಿಂದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ.
1935ರಲ್ಲಿ ಸ್ಪಾಪನೆಗೊಂಡ ಈ ಸರ್ಕಲ್, ಅಮೇರಿಕಾದ ಹಳೆಯ ವಿಮರ್ಶಕರ ಸಂಘವಾಗಿದೆ. ಈ ಸಂಸ್ಥೆಯು ಪ್ರತೀ ವರ್ಷ ಪ್ರಶಸ್ತಿ ನೀಡುತ್ತಾ ಬಂದಿದ್ದು, ಈ ವರ್ಷ ಸಾಕಷ್ಟು ಪೈಪೋಟಿ ಏರ್ಪಟಿತ್ತು. ಕೆಲವು ಜನಪ್ರಿಯ ನಿರ್ದೇಶಕರನ್ನು ಹಿಂದಕ್ಕೆ ಹಾಕಿ, ರಾಜಮೌಳಿ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಇದುವರೆಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ರಾಜಮೌಳಿ ಅವರಿಗೆ, ಇದು ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ. ಈ ವರ್ಷದ ಮಾರ್ಚ್ನಲ್ಲಿ 'ಆರ್.ಆರ್.ಆರ್' ಚಿತ್ರ ಬಿಡುಗಡೆಯಾಗಿದ್ದು, ಜನರಿಂದ ಮೆಚ್ಚುಗೆ ಪಡೆದಿದ್ದಷ್ಟೇ ಅಲ್ಲ, ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ರೂ.ಗಳಿಗೆ ಹೆಚ್ಚು ಕಲೆಕ್ಷನ್ ಕಂಡಿದೆ.
ನ್ಯೂಯಾರ್ಕ್ ಫಿಲಂ ಕ್ರಿಟಿಕ್ಸ್ ಸಂಸ್ಥೆಯು ಶುಕ್ರವಾರ ಈ ಪ್ರಶಸ್ತಿಗಳನ್ನು ಘೋಷಿಸಿದ್ದು, 2023ರ ಜನವರಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆ.