ಇಲ್ಲಿ ಯಾರೂ ಮೇಲಲ್ಲ!; ಆರ್​​ಆರ್​ಆರ್​ ನಾಯಕರ ಕುರಿತು ರಾಜಮೌಳಿ

RRR
Published on

ಚಿಕ್ಕಬಳ್ಳಾಪುರ: ‘ಆರ್​ಆರ್​ಆರ್’ ಚಿತ್ರ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಇದೇ ಮೊದಲ ಬಾರಿಗೆ ಮೆಗಾ ಫ್ಯಾಮಿಲಿಯಿಂದ ರಾಮ್ರಣ್ ತೇಜ ಮತ್ತು ನಂದಮೂರಿ ಕುಟುಂಬದ ಜೂ.ಎನ್​ಟಿಆರ್ ಈ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದು, ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇಬ್ಬರು ನಾಯಕರ ಪೈಕಿ ಸಿನಿಮಾದಲ್ಲಿ ಯಾರಿಗೆ ಹೆಚ್ಚು ಗತ್ತಿನ ಪಾತ್ರ? ಯಾರಿಗೆ ವಿಶೇಷ ಒತ್ತು? ಯಾರು ಯಾರನ್ನು ಮೀರಿಸಿದ್ದಾರೆ ಎನ್ನುವ ಕುತೂಹಲ ಸಹಜ. ಇಂಥದ್ದೊಂದು ಪ್ರಶ್ನೆಯನ್ನು ನಿರ್ದೇಶಕ ರಾಜಮೌಳಿ ಎದುರು ಇಟ್ಟರೆ, ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಶನಿವಾರ ‘ಆರ್​ಆರ್​ಆರ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್​ಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಬ್ಬರೂ ನಾಯಕರಿಗೆ ದೊಡ್ಡ ಅಭಿಮಾನ ಬಳಗವಿದೆ. ಅವರ ಸಿನಿಮಾಗಳು ಸೋಲಲಿ ಅಥವಾ ಗೆಲ್ಲಲಿ, ಅಭಿಮಾನಿಗಳು ಸದಾ ತಮ್ಮ ನಾಯಕನೇ ಗ್ರೇಟ್ ಎನ್ನುತ್ತಾರೆ. ಸೋಲು, ಗೆಲುವು ಎಲ್ಲವನ್ನೂ ಸಕಾರಾತ್ಮಕವಾಗಿಯೇ ಹೇಳಿಕೊಳ್ಳುತ್ತಾರೆ. ನನ್ನ ಸಿನಿಮಾದಲ್ಲಿ ಯಾರಿಗೂ ಪ್ರತ್ಯೇಕವಾಗಿ ಹೆಚ್ಚು ಒತ್ತು ನೀಡಿಲ್ಲ. ಆಯಾ ಪಾತ್ರಗಳಿಗೆ ಜೀವ ತುಂಬಿಸಲು ಪ್ರಯತ್ನಿಸಿದ್ದೇನೆ. ನೋಡಿದವರು ಖುಷಿಪಡುವಂತೆ ಚಿತ್ರಿಸುವ ಪ್ರಯತ್ನ ಮಾಡಿದ್ದೇನೆ. ಅದಕ್ಕೆ ಸರಿಯಾಗಿ ಇಬ್ಬರೂ ಪರಸ್ಪರ ಪೈಪೋಟಿಯಲ್ಲಿ ನಟಿಸಿದ್ದಾರೆ. ನನ್ನ ನಿರೀಕ್ಷೆಗೂ ಮೀರಿ ಜೀವ ತುಂಬಿದ್ದಾರೆ’ ಎಂದು ತಿಳಿಸಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ಜೂ ಎನ್​ಟಿಆರ್, ‘ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಸೂಚಿಸುವ ಸಂದರ್ಭದಲ್ಲಿಯೇ ಸಿನಿಮಾ ಅಷ್ಟು ಬೇಗ ಮುಗಿಯುವುದಿಲ್ಲ ಮತ್ತು ನಿರ್ದೇಶಕರ ನಿರೀಕ್ಷೆಗೆ ಅನುಗುಣವಾಗಿ ನಟಿಸುವುದು ಅಷ್ಟು ಸುಲಭವಲ್ಲ ಎಂದು ಗೊತ್ತಿತ್ತು. ನಿರ್ದೇಶಕರು ನಮ್ಮ ಪಾಲಿಗೆ ಹೀರೋ, ವಿಲನ್ ಎರಡೂ ಆಗಿದ್ದಾರೆ’ ಎಂದು ತಮಾಷೆ ಮಾಡಿದರು.

ಜೇಮ್ಸ್​ಗೆ ಪೈಪೋಟಿ ಇಲ್ಲ: ಪುನೀತ್ ಅಭಿನಯದ ‘ಜೇಮ್್ಸ’ ಬಿಡುಗಡೆಯಾಗಿ ಮರುವಾರವೇ ‘ಆರ್​ಆರ್​ಆರ್’ ಬರುತ್ತಿದ್ದರೂ ಆ ಚಿತ್ರಕ್ಕೆ ತಮ್ಮ ಚಿತ್ರದಿಂದ ಯಾವುದೇ ಪೈಪೋಟಿ ಇಲ್ಲ ಎನ್ನುತ್ತಾರೆ ರಾಜಮೌಳಿ. ‘ಕರ್ನಾಟಕದಲ್ಲಿ ಮೊದಲೇ ಮಾತನಾಡಿಕೊಂಡಂತೆ ಪರಸ್ಪರ ಹೊಂದಾಣಿಕೆಯಲ್ಲಿ ‘ಆರ್​ಆರ್​ಆರ್’ ಬಿಡುಗಡೆಯಾಗುತ್ತಿದೆ. ‘ಜೇಮ್್ಸ’ಗೆ ಯಾವುದೇ ಪೈಪೋಟಿ ಇಲ್ಲ. ಈಗಾಗಲೇ ಆ ಚಿತ್ರ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಮುಂದಿನ ದಿನಗಳಲ್ಲೂ ಇದೇ ವೇಗದಲ್ಲಿ ಸಾಗಲಿ’ ಎಂದು ಹಾರೈಸಿದರು.

ಈಗಲೂ ಪುನೀತ್ ದೂರವಾಗಿಲ್ಲ: ಪುನೀತ್ ಅಕಾಲಿಕ ನಿಧನದಿಂದ ಬೇಸರ ದಲ್ಲಿಯೇ ಮಾತನಾಡಿದ ಜೂ ಎನ್​ಟಿಆರ್, ‘ಯಾವತ್ತೂ ಅವರು ಇಲ್ಲ ಎಂಬ ಭಾವನೆ ಇಲ್ಲ. ಬದುಕಿದ್ದರೆ ನಮ್ಮ ‘ಆರ್​ಆರ್​ಆರ್’ ಸಿನಿಮಾ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿರುತ್ತಿದ್ದರು. ಅವರು ಸದಾ ನೆನಪಿನಲ್ಲಿ ನಮ್ಮ ಜತೆಯೇ ಇರುತ್ತಾರೆ. ನಮ್ಮೆಲ್ಲರ ಹೃದಯದಲ್ಲಿರುತ್ತಾರೆ’ ಎಂದರು.

ಕನ್ನಡದಲ್ಲಿ ನಟಿಸಲು ರೆಡಿ: ಈ ಹಿಂದೆ, ‘ಸಿಪಾಯಿ’ ಚಿತ್ರದಲ್ಲಿ ರವಿಚಂದ್ರನ್ ಜತೆಗೆ ಚಿರಂಜೀವಿ ನಟಿಸಿದ್ದರು. ಹಾಗೆಯೇ ಅವರ ಪುತ್ರ ರಾಮ್ರಣ್ ತೇಜ ಸಹ ಒಳ್ಳೆಯ ಕಥೆ ಸಿಕ್ಕರೆ ಕನ್ನಡದಲ್ಲಿ ನಟಿಸಲು ರೆಡಿ ಇರುವುದಾಗಿ ಘೊಷಿಸಿದ್ದಾರೆ. ಜೂ. ಎನ್​ಟಿಆರ್ ಸಹ ತಾನೂ ಸೇರಿಕೊಳ್ಳುವುದಾಗಿ ಧ್ವನಿಗೂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net