ಕನ್ನಡಿಗರ ಕ್ಷಮೆ ಕೇಳಿದ ರಾಜಮೌಳಿ: ಆರ್​ಆರ್​ಆರ್​ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ

Rajamouli
Published on

ಬೆಂಗಳೂರು: ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಸಿನಿಮಾ ಜ.7ಕ್ಕೆ ತೆರೆಗೆ ಬರುತ್ತಿದೆ. ಹೀಗಾಗಿ ಪ್ರಚಾರ ಕಾರ್ಯದಲ್ಲಿಯೂ ತಂಡ ತೊಡಗಿಸಿಕೊಂಡಿದೆ. ಹೀಗಿರುವಾಗಲೇ, ಇದೇ ಚಿತ್ರದ ಹಾಡೊಂದು ಶುಕ್ರವಾರ ಬಿಡುಗಡೆ ಆಗಿದೆ. ಸ್ವತಃ ನಿರ್ದೇಶಕ ರಾಜಮೌಳಿ, ಬೆಂಗಳೂರಿಗೆ ಆಗಮಿಸಿ ‘ಜನನಿ..’ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ ಸಿನಿಮಾ ಸೇರಿ ಒಂದಷ್ಟು ವಿಚಾರಗಳನ್ನು ಮಾತನಾಡಿದ್ದಾರೆ.

ಕ್ಷಮಿಸಿ ಎನ್ನುತ್ತಲೇ ಮಾತು ಆರಂಭಿಸಿದ ರಾಜಮೌಳಿ, ‘‘ಆರ್​ಆರ್​ಆರ್‘ ಸಿನಿಮಾಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಇದುವರೆಗೂ ಯಾವುದೇ ಪತ್ರಿಕಾಗೋಷ್ಠಿ ನಡೆದಿಲ್ಲ. ಹಾಗಾಗಿ ಕ್ಷಮೆ ಇರಲಿ. ಡಿಸೆಂಬರ್ ಮೊದಲ ವಾರದಲ್ಲಿ ಕರ್ನಾಟಕದಲ್ಲಿಯೇ ಬಿಡುಗಡೆ ಪೂರ್ವ ಗ್ರ್ಯಾಂಡ್ ಇವೆಂಟ್ ಇರಲಿದೆ. ಟ್ರೇಲರ್ ಸಹ ಬಿಡುಗಡೆ ಆಗಲಿದೆ’ ಎಂದ ಅವರು ‘ಜನನಿ ...’ ಹಾಡನ್ನು ಬಿಡುಗಡೆ ಮಾಡಿದರು.

ನಂತರ ಸದಾಶಿವನಗರದಲ್ಲಿನ ಪುನೀತ್ ಅವರ ಮನೆಗೆ ತೆರಳಿದ ರಾಜಮೌಳಿ, ಅಶ್ವಿನಿ ಪುನೀತ್ ಅವರನ್ನು ಭೇಟಿಯಾದರು. ಬಳಿಕ ಮಾತನಾಡಿದ ಅವರು, ‘ಈ ಹಿಂದೆ ಹಲವು ಬಾರಿ ಪುನೀತ್ ಅವರನ್ನು ಭೇಟಿಯಾಗಿದ್ದೆ. ಮನೆಗೂ ಭೇಟಿ ನೀಡಿದ್ದೆ. ಮನೆಯ ಒಬ್ಬ ಸದಸ್ಯನಂತೆ ನನ್ನನ್ನು ಬರಮಾಡಿಕೊಂಡರು. ಅವರ ಬಗ್ಗೆ ಹೇಳುವುದಕ್ಕೆ ಪದಗಳಿಲ್ಲ. ಅವರ ಒಳ್ಳೇ ಕೆಲಸಗಳನ್ನು ಸ್ಮರಿಸೋಣ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net