

ಬೆಂಗಳೂರು: ದರ್ಶನ್ ನಟನೆಯ ‘ರಾಜವೀರ ಮದಕರಿ ನಾಯಕ’ ಸಿನಿಮಾದ ಚಿತ್ರೀಕರಣ ಫೆ.10ರಿಂದ ಆರಂಭವಾಗಲಿದೆ.
ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಆಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ಈಗಾಗಲೇ ಕೇರಳದಲ್ಲಿ ಸೆಟ್ ಹಾಕಲಾಗುತ್ತಿದೆ. ಬಿ.ಎಲ್. ವೇಣು ಅವರ ಕಥೆ-ಚಿತ್ರಕಥೆ ಇರುವ ಈ ಸಿನಿಮಾದಲ್ಲಿ ಸುಮಲತಾ ಅಂಬರೀಷ್ ಸಹ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ.
ಹೈ ಬಜೆಟ್ ಮತ್ತು ಐತಿಹಾಸಿಕ ಕಥೆಯಿಂದಾಗಿ ಈಗಾಗಲೇ ಹೈಪ್ ಕ್ರಿಯೇಟ್ ಮಾಡಿರುವ ಈ ಚಿತ್ರದ ಮೊದಲ ಷೆಡ್ಯೂಲ್ ಕೇರಳದಲ್ಲಿ ಆರಂಭವಾಗಲಿದೆ. ಚಿತ್ರೀಕರಣದಲ್ಲಿ ದರ್ಶನ್ ಕೆಲ ದಿನಗಳ ಕಾಲ ಪಾಲ್ಗೊಳ್ಳುತ್ತಾರೆ. ನಂತರ ಫೆ.16ಕ್ಕೆ ಹುಟ್ಟುಹಬ್ಬದ ಪ್ರಯುಕ್ತ 3 ದಿನಗಳ ಬ್ರೇಕ್ ತೆಗೆದುಕೊಂಡು ಬೆಂಗಳೂರಿಗೆ ಮರಳಲಿದ್ದಾರೆ. ಕೇರಳದಲ್ಲಿ ಚಿತ್ರೀಕರಣ ಪೂರ್ಣಗೊಂಡ ಬಳಿಕ ಚಿತ್ರದುರ್ಗ, ಬೆಂಗಳೂರು ಮತ್ತು ಹೈದರಾಬಾದ್ನಲ್ಲಿ ಶೂಟಿಂಗ್ ನಡೆಯಲಿದೆ.
‘ರಾಜವೀರ ಮದಕರಿ ನಾಯಕ’ನಿಗೆ ಹಂಸಲೇಖ ಸಂಗೀತ ಸಂಯೋಜಿಸಲಿದ್ದು, ಅಶೋಕ್ ಕಶ್ಯಪ್ ಛಾಯಾಗ್ರಹಣ ಮಾಡಲಿದ್ದಾರೆ. ವಿಶೇಷ ಎಂದರೆ ನಟ ದೊಡ್ಡಣ್ಣ, ಶ್ರೀನಿವಾಸಮೂರ್ತಿ ಸಹ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಇತ್ತೀಚೆಗಷ್ಟೇ ಕಥೆ, ಚಿತ್ರಕಥೆ, ಸಂಭಾಷಣೆ ಕೆಲಸ ಮುಗಿದಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ದರ್ಶನ್ ಹುಟ್ಟುಹಬ್ಬದ ಹೊತ್ತಿಗೆ ಕೆಲ ದಿನಗಳ ಶೂಟಿಂಗ್ ನಡೆದಿರುವ ಕಾರಣಕ್ಕೆ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ‘ರಾಜವೀರ ಮದಕರಿ ನಾಯಕ’ನ ಫಸ್ಟ್ ಲುಕ್ ರಿಲೀಸ್ ಆಗಬಹುದು ಎಂದು ಕಾಯುತ್ತಿದ್ದಾರೆ.