

ಬೆಂಗಳೂರು: ರಾಜ್ವರ್ಧನ್ ಅಭಿನಯದ ‘ಬಿಚ್ಚುಗತ್ತಿ’ ಫೆಬ್ರವರಿಯಲ್ಲಿ ಬಿಡುಗಡೆಯಾಗಿ, ಮೆಚ್ಚುಗೆ ಪಡೆದಿದ್ದು ಗೊತ್ತೇ ಇದೆ. ಆ ಚಿತ್ರದ ನಂತರ ಅವರು ಈಗೇನು ಮಾಡುತ್ತಿದ್ದಾರೆ, ಹೊಸದಾಗಿ ಯಾವ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬ ಕುತೂಹಲ ಸಹಜ. ‘ಬಿಚ್ಚುಗತ್ತಿ’ ಬಿಡುಗಡೆಯಾದ ಮೇಲೆ ರಾಜ್ವರ್ಧನ್ ಹೊಸ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಇನ್ನಷ್ಟೇ ಗ್ರೀನ್ಸಿಗ್ನಲ್ ಕೊಡಬೇಕಿದೆ. ಆದರೆ, ‘ಬಿಚ್ಚುಗತ್ತಿ’ ಮುನ್ನವೇ ಅವರೊಂದು ಚಿತ್ರ ಒಪ್ಪಿದ್ದು, ಈಗಾಗಲೇ ಆ ಚಿತ್ರದ ಒಂದು ಹಂತದ ಚಿತ್ರೀಕರಣ ಸಹ ಮುಗಿದಿದೆ.
ಹೌದು, ರಾಜ್ವರ್ಧನ್ ಸದ್ದಿಲ್ಲದೆ ಒಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಪಿ2 ಪ್ರೊಡಕ್ಷನ್ಸ್ನಡಿ ಪರಮೇಶ್ ಮತ್ತು ಪ್ರೇಮ್ ನಿರ್ವಿುಸುತ್ತಿದ್ದಾರೆ. ಈ ಹಿಂದೆ ‘ಗಣಪ’, ‘ಪಲ್ಲಕ್ಕಿ’, ‘ಪಾರಿಜಾತ’ ಮುಂತಾದ ಚಿತ್ರಗಳನ್ನು ನಿರ್ವಿುಸಿರುವ ಪರಮೇಶ್ ಮತ್ತು ಪ್ರೇಮ್ ಇದೀಗ ರಾಜ್ವರ್ಧನ್ ಅಭಿನಯದಲ್ಲಿ ಹೊಸ ಚಿತ್ರವನ್ನು ಪ್ರಾರಂಭಿಸಿದ್ದಾರೆ. ಈಗಾಗಲೇ ಮೂಡಿಗೆರೆ ಮುಂತಾದ ಕಡೆ ಒಂದು ಹಂತದ ಚಿತ್ರೀಕರಣ ಸಹ ಆಗಿದೆ. ಅಷ್ಟರಲ್ಲಿ ‘ಬಿಚ್ಚುಗತ್ತಿ’ ಚಿತ್ರವು ಬಿಡುಗಡೆಗೆ ಬಂದಿದ್ದರಿಂದ, ಅದರ ಪ್ರಮೋಷನ್ಗಾಗಿ ಅವರು ರಜೆ ತೆಗೆದುಕೊಂಡಿದ್ದಾರೆ. ಎಲ್ಲ ಮುಗಿದು, ಇನ್ನೇನು ಎರಡನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಕರೊನಾ ಭೀತಿಯಿಂದ ಚಿತ್ರರಂಗವೇ ಬಂದ್ ಆಗಿದೆ. ಎಲ್ಲವೂ ಒಂದು ಹಂತಕ್ಕೆ ಬಂದು ಚಿತ್ರೀಕರಣ ಪ್ರಾರಂಭವಾಗುತ್ತಿದ್ದಂತೆಯೇ, ಈ ಹೊಸ ಚಿತ್ರದ ಚಿತ್ರೀಕರಣ ಸಹ ಶುರುವಾಗಲಿದೆ.
ಈ ಮಧ್ಯೆ, ಅವರು ಒಂದಿಷ್ಟು ಕಥೆಗಳನ್ನು ಕೇಳುತ್ತಿದ್ದಾರಂತೆ. ‘ಇತ್ತೀಚಿನ ದಿನಗಳಲ್ಲಿ ಕೆಲವು ಕಥೆಗಳನ್ನ ಕೇಳಿದೆ. ಈ ಪೈಕಿ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರು ಹೇಳಿದ ಒನ್ಲೈನ್ ಬಹಳ ಇಷ್ಟವಾಗಿದೆ. ತುಂಬ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ ಅವರು. ಆದರೆ, ‘ಬಿಚ್ಚುಗತ್ತಿ’ಯ ತರಹವೇ ಆ ಚಿತ್ರಕ್ಕೂ ಒಂದಿಷ್ಟು ತಯಾರಿಬೇಕು. ಆ ಚಿತ್ರ ಒಪು್ಪವ ಸಾಧ್ಯತೆ ಇದೆ’ ಎನ್ನುತ್ತಾರೆ ರಾಜ್ವರ್ಧನ್.
ಇನ್ನು ‘ಬಿಚ್ಚುಗತ್ತಿ - ಚಾಪ್ಟರ್ ಒಂದು - ದಳವಾಯಿ ದಂಗೆ’ ಚಿತ್ರದ ಸಂದರ್ಭದಲ್ಲೇ ಅದರ ಮುಂದುವರಿದ ಭಾಗ ಬರುತ್ತದೆ ಎಂದು ಹೇಳಲಾಗಿತ್ತು. ಹೆಸರೇ ಹೇಳುವಂತೆ ಚಿತ್ರದಲ್ಲಿ ಒಂದು ಅಧ್ಯಾಯವನ್ನು ಮಾತ್ರ ತೋರಿಸಲಾಗಿದೆ. ಇನ್ನೊಂದು ಭಾಗ ಬಿಡುಗಡೆಯಾಗಬೇಕಿದೆ. ಹಾಗಾದರೆ, ‘ಬಿಚ್ಚುಗತ್ತಿ - ಚಾಪ್ಟರ್ ಟೂ’ ಯಾವಾಗ ಎಂಬ ಪ್ರಶ್ನೆ ಬರದೇ ಇರದು. ಈ ವಿಷಯವಾಗಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸಹ ಫೋನ್ ಮಾಡಿ, ಚಿತ್ರವನ್ನು ಮುಂದುವರಿಸುವ ಸಲಹೆ ನೀಡಿದರಂತೆ. ‘ಸ್ವಾಮೀಜಿ ಫೋನ್ ಮಾಡಿದ್ದರು. ಚಿತ್ರವನ್ನು ಮುಂದುವರಿಸುವುದಕ್ಕೆ ಸಲಹೆ ನೀಡಿದರು. ನಮಗೂ ಆ ಚಿತ್ರ ಮಾಡುವ ಆಸೆ ಇದೆ. ಮುಂದುವರಿದ ಭಾಗದ ಕಥೆ ಅದ್ಭುತವಾಗಿದೆ. ಅವರು ಚಿತ್ರದುರ್ಗಕ್ಕೆ ಕರೆದಿದ್ದಾರೆ. ಸದ್ಯದಲ್ಲೇ ಹೋಗಿ ಮಾತನಾಡಿ ಬರಬೇಕು. ಬಹುಶಃ ಈ ವರ್ಷದ ಕೊನೆಯ ಹೊತ್ತಿಗೆ ಈ ವಿಷಯವಾಗಿ ಏನಾದರೂ ಸ್ಪಷ್ಟತೆ ಸಿಗಬಹುದು’ ಎನ್ನುತ್ತಾರೆ ರಾಜ್ವರ್ಧನ್.