

ಡಾ. ರಾಜಕುಮಾರ್ ಇಲ್ಲದೆ ಇಂದಿಗೆ 16 ವರ್ಷಗಳು. ಸರಿಯಾಗಿ ಇದೇ ದಿನ, ಅಂದರೆ 2006ರ ಏಪ್ರಿಲ್ 12ರಂದು ಡಾ. ರಾಜಕುಮಾರ್ ಅನಾರೋಗ್ಯದಿಂದ ನಿಧನರಾದರು. ಸರಳ-ಸಜ್ಜನಿಕೆಗೆ, ವಿಭಿನ್ನ ಪಾತ್ರಗಳಿಗೆ, ಅದ್ಭುತ ಅಭಿನಯಕ್ಕೆ, ಯಶಸ್ವಿ ಚಿತ್ರಗಳಿಗೆ, ವ್ಯಕ್ತಿತ್ವಕ್ಕೆ, ಗಾಯನಕ್ಕೆ, ಸಹೃದಯತೆಗೆ, ಜನಪ್ರಿಯತೆಗೆ, ಸಾಧನೆಗೆ, ಆಧ್ಯಾತ್ಮ ಚಿಂತನೆಗೆ ... ಹೀಗೆ ಒಂದಲ್ಲ ಒಂದು ಕಾರಣಗಳಿಗೆ ರಾಜಕುಮಾರ್ ಪ್ರತಿ ದಿನ ನೆನಪಾಗುತ್ತಲೇ ಇದ್ದಾರೆ. ಇದೆಲ್ಲದರ ಜತೆಗೆ ಅವರ ಸಿನಿಮಾ ವಿಶೇಷತೆಗಳ ಬಗ್ಗೆಯೇ ಇಂದಿನಿಂದ ಏ. 24ರ ವರೆಗೆ ಸರಣಿ ಲೇಖನಗಳ ಗುಚ್ಛ ‘ವಿಜಯವಾಣಿ’ಯಲ್ಲಿ ಪ್ರಕಟಗೊಳ್ಳಲಿದೆ. ಮೊದಲ ಲೇಖನವಾಗಿ ಮೌಲ್ಯಾಧಾರಿತ ಸಿನಿಮಾ ಆಯ್ಕೆ ಕುರಿತ ಬರಹ ಇಲ್ಲಿದೆ.
ಡಾ. ರಾಜ್ ಚಿತ್ರಗಳು ಒಂದಲ್ಲ ಒಂದು ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದವು. ಸಮಾಜದ ಓರೆಕೋರೆಗಳನ್ನು ತಿದ್ದುತ್ತಾ ತನ್ನದೇ ರೀತಿಯಲ್ಲಿ ಸಾಮಾಜಿಕ ವಿಡಂಬನೆಯನ್ನು ಮಾಡುತ್ತಿದ್ದವು. ಈ ಮೂಲಕ ತಪ್ಪು-ಸರಿಗಳನ್ನು ಹೇಳುತ್ತಿದ್ದವು. ಬಹುಶಃ ಡಾ. ರಾಜಕುಮಾರ್ ಅವರ ಚಿತ್ರಗಳಲ್ಲಿ ಮೊಟ್ಟಮೊದಲ ಬಾರಿಗೆ ಸಮಾಜದ ಒಂದು ಪಿಡುಗಿನ ಕುರಿತಾಗಿ ಧ್ವನಿ ಎತ್ತಿದ ಚಿತ್ರ ಎಂದರೆ ಅದು ‘ರಾಯರ ಸೊಸೆ’ (1957). ಈ ಚಿತ್ರದಲ್ಲಿ ಆ ಕಾಲಕ್ಕೆ ಅತ್ಯಂತ ದೊಡ್ಡ ಪಿಡುಗಾಗಿದ್ದ ವರದಕ್ಷಿಣೆ ಸಮಸ್ಯೆಯ ಕುರಿತು ಬೆಳಕು ಚೆಲ್ಲಲಾಗಿತ್ತು. ಆ ನಂತರ ‘ಮದುವೆ ಮಾಡಿ ನೋಡು’, ‘ಜೀವನ ತರಂಗ’ ಮುಂತಾದ ಚಿತ್ರಗಳಲ್ಲೂ ವರದಕ್ಷಿಣೆ ವಿರುದ್ಧ ಹೋರಾಟವಿದೆ.
ಹೀಗೆ ಒಂದು ಪಿಡುಗಿನ ವಿರುದ್ಧ ಹೋರಾಟ ಮಾಡುವ ಮೂಲಕ ಶುರುವಾದ ಈ ಸಾಮಾಜಿಕ ವಿಡಂಬನೆ ಮತ್ತು ಮೌಲ್ಯಗಳನ್ನು ಬಿತ್ತುವ ಕೆಲಸ, ನಂತರ ಹಲವು ಚಿತ್ರಗಳಲ್ಲಿ ಮತ್ತು ಹಾಡುಗಳಲ್ಲಿ ನೋಡಬಹುದು. ಇದಕ್ಕೆ ಶ್ರೇಷ್ಠ ಉದಾಹರಣೆ ಎಂದರೆ, ‘ಭಕ್ತ ಕನಕದಾಸ’. ಈ ಚಿತ್ರದಲ್ಲಿನ ‘ಕುಲಕುಲಕುಲವೆಂದು ಹೊಡೆದಾಡದಿರಿ ...’ ಎಂಬ ಒಂದು ಹಾಡು ಸಾಕು, ಜಾತಿ, ಕುಲ ಎಂದು ಜಗಳವಾಡದೆ, ಎಲ್ಲರನ್ನೂ ಸಮಭಾವದಿಂದ ನೋಡಬೇಕು ಎಂದು ಸಾರುವುದಕ್ಕೆ.
‘ಚಂದವಳ್ಳಿಯ ತೋಟ’, ‘ಮುರಿಯದ ಮನೆ’, ‘ಭೂದಾನ’ ಚಿತ್ರಗಳು ಅವಿಭಕ್ತ ಕುಟುಂಬಗಳ ಅವಶ್ಯಕತೆಯನ್ನು ಸಾರಿದವು. ‘ಬಂಗಾರದ ಹೂವು’ ಮತ್ತು ‘ಹಣ್ಣೆಲೆ ಚಿಗುರಿದಾಗ’ ಚಿತ್ರಗಳು ವಿಧವಾ ವಿವಾಹದ ಕುರಿತ ಚಿತ್ರವಾಗಿದ್ದವು. ಗಲ್ಲು ಶಿಕ್ಷೆಯನ್ನು ವಿಶ್ಲೇಷಣಾತ್ಮಕವಾಗಿ ‘ಬಿಡುಗಡೆ’ ಚಿತ್ರದಲ್ಲಿ ತೋರಿಸಲಾಗಿತ್ತು. ‘ಬಂಗಾರದ ಮನುಷ್ಯ’ ಚಿತ್ರದಲ್ಲಿ ಕೃಷಿಯ ಮಹತ್ವ, ‘ಗಂಧದ ಗುಡಿ’ಯಲ್ಲಿ ಪರಿಸರ ರಕ್ಷಣೆ, ‘ಧ್ರುವತಾರೆ’ಯಲ್ಲಿ ರೈತರ ವಿವಿಧ ಸಮಸ್ಯೆಗಳು, ‘ಜ್ವಾಲಾಮುಖಿ’ಯಲ್ಲಿ ಅನ್ಯಾಯ ಮತ್ತು ಭ್ರಷ್ಟಾಚಾರ, ‘ಭಾಗ್ಯದ ಲಕ್ಷ್ಮೀ ಬಾರಮ್ಮ’ದಲ್ಲಿ ನಿರುದ್ಯೋಗ, ‘ಶ್ರುತಿ ಸೇರಿದಾಗ’ ಚಿತ್ರದಲ್ಲಿ ಜ್ಯೋತಿಷ್ಯದ ಮೇಲೆ ಅತಿಯಾದ ನಂಬಿಕೆ, ‘ಜೀವನ ಚೈತ್ರ’ದಲ್ಲಿ ಮದ್ಯಪಾನದಿಂದಾಗುವ ದುಷ್ಪರಿಣಾಮಗಳು, ‘ಆಕಸ್ಮಿಕ’ದಲ್ಲಿ ವೇಶ್ಯಾವೃತ್ತಿ, ‘ಶಬ್ಧವೇಧಿ’ಯಲ್ಲಿ ಮಾದಕ ವ್ಯಸನ ... ಹೀಗೆ ಹಲವು ಚಿತ್ರಗಳ ಮೂಲಕ ಅನೇಕ ಸಾಮಾಜಿಕ ಪಿಡುಗುಗಳನ್ನು ಮತ್ತು ಅದರ ವಿರುದ್ಧ ಜಾಗೃತಿ ಮೂಡಿಸುವ ಕೆಲಸಗಳನ್ನು ಡಾ. ರಾಜಕುಮಾರ್ ಮಾಡಿದರು.
ಇನ್ನು, ಅವರ ಚಿತ್ರಗಳಲ್ಲಿನ ಹಾಡುಗಳಲ್ಲೂ ಸಹ ಬದುಕನ್ನು ವಿಶ್ಲೇಷಿಸುವಂತಹ, ವಿಮಶಿಸುವಂತಹ, ತಪು್ಪ-ಸರಿಗಳನ್ನು ತಿಳಿಸುವಂತಹ ಸಂದೇಶಗಳಿದ್ದವು. ‘ಆಡುತ್ತಿರುವ ಮೋಡಗಳೇ ...’, ’ಯಾರೇ ಕೂಗಾಡಲೀ ಊರೇ ಹೋರಾಡಲೀ ...’, ‘ಆಗದು ಎಂದು ಕೈಕಟ್ಟಿ ಕುಳಿತರೆ ...’, ‘ನಗುನಗುತಾ ನಲಿ ನಲೀ ಏನೇ ಆಗಲೀ ...’, ‘ಭಗವಂತ ಕೈಕೊಟ್ಟ ದುಡಿಯೋಕಂತ ...’, ‘ಹನಿಹನಿಗೂಡಿದ್ರೆ ಹಳ್ಳ ...’, ‘ನೀನಾರಿಗಾದೆಯೋ ಎಲೆ ಮಾನವ ...’, ‘ಮಾನವನಾಗುವೆಯಾ ದಾನವನಾಗುವೆಯಾ ...’, ‘ಆಡಿಸಿ ನೋಡು ಬೀಳಿಸಿ ನೋಡು ...’, ‘ಮರೆಯದಿರು ಸ್ನೇಹ ಬಗೆಯದಿರು ದ್ರೋಹ ...’, ‘ಬಾನಿಗೊಂದು ಎಲ್ಲೆ ಎಲ್ಲಿದೆ ...’, ‘ಏನೆಂದು ನಾ ಹೇಳಲಿ ಮಾನವನಾಸೆಗೆ ಕೊನೆಯೆಲ್ಲಿ ...’ ಇವು ಕೆಲವು ಉದಾಹರಣೆಗಳು ಅಷ್ಟೇ. ಇವೆಲ್ಲವೂ ಮನುಷ್ಯನನ್ನು ಯಾರಿಗೂ ಕೇಡು ಮಾಡದೆ, ಒಳ್ಳೆಯ ಜೀವನವನ್ನು ನಡೆಸುವಂತಹ ಪ್ರೇರಕ ಹಾಡುಗಳಾಗಿವೆ ಮತ್ತು ಎಷ್ಟೇ ವರ್ಷಗಳಾದರೂ ಕೇಳಿದರೆ ಸ್ಪೂರ್ತಿ ತುಂಬುವಂತಿವೆ. ಈ ಕಾರಣಗಳಿಗೇ ಡಾ. ರಾಜಕುಮಾರ್, ಅವರ ಪಾತ್ರಗಳು ಮತ್ತು ಚಿತ್ರಗಳು ಈಗಲೂ ಜನರ ಮನಸ್ಸಿಗೆ ಹತ್ತಿರವಾಗಿವೆ ಮತ್ತು ಪದೇಪದೆ ಮೆಲುಕು ಹಾಕುವಂತಿವೆ ಎಂದರೆ ತಪ್ಪಿಲ್ಲ.
ನಿರೂಪಣೆ: ಚೇತನ್ ನಾಡಿಗೇರ್