ಮಾರಿಗೆ ದಾರಿಬಿಡಿ; ರಾಜ್ ನಿರ್ದೇಶನದ ಹೊಸ ಚಿತ್ರದ ಫಸ್ಟ್ ಲುಕ್

toby
Published on

ಬೆಂಗಳೂರು: ‘ಒಂದು ಮೊಟ್ಟೆಯ ಕಥೆ’ ಮೂಲಕ ನಾಯಕ, ನಿರ್ದೇಶಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಾಜ್ ಬಿ. ಶೆಟ್ಟಿ, ನಂತರ ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಒಂದು ಚಿತ್ರದಲ್ಲಿ ಕಾಮಿಡಿ ಮತ್ತೊಂದು ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಡ್ರಾಮಾ ಕಥೆ ಹೇಳಿದ್ದರು ರಾಜ್. ಇದೀಗ ಹೊಸ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಸಿನಿಮಾ ಹೆಸರು ‘ಟೋಬಿ’. ಅದಕ್ಕೆ ‘ಮಾರಿ ಮಾರಿ ಮಾರಿಗೆ ದಾರಿ’ ಎಂಬ ಅಡಿಬರಹವಿದೆ.

ಮಂಗಳವಾರ(ಜೂನ್ 13) ಚಿತ್ರದ ಟೈಟಲ್ ರಿವೀಲ್ ಮಾಡಲಾಗಿದೆ. ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ ಪೋಸ್ಟರ್‌ನಲ್ಲಿ ನೋಸ್ ರಿಂಗ್ ಹಾಕಿಕೊಂಡ ಟಗರು ಎದ್ದು ಕಾಣುತ್ತದೆ. ಮುಖದಲ್ಲಿ ರಕ್ತದ ಕಲೆ, ಕಣ್ಣಲ್ಲಿರುವ ಆಕ್ರೋಶದ ಜತೆ ಮಿಸ್ಸಿಂಗ್ ಎಂಬ ಬರಹ, ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಮೋಷನ್ ಪೊಸ್ಟರ್‌ನಲ್ಲಿ ಕೇಳಿಬರುವ ಮಿಥುನ್ ಮುಕುಂದನ್ ಹಿನ್ನೆಲೆ ಸಂಗೀತ ಇನ್ನಷ್ಟು ಆಕರ್ಷಕವಾಗಿದೆ. ರಾಜ್ ಬಿ. ಶೆಟ್ಟಿ ಜತೆ ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ ಮುಖ್ಯ ತಾರಾಗಣದಲ್ಲಿರಲಿದ್ದಾರೆ. ಆಗಸ್ಟ್ 25ರಂದು ‘ಟೋಬಿ’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ನನ್ನ ಸಿಟ್ಟಿನ ಅನಾವರಣ
ಈವರೆಗೆ ನಾವು ಮಾಡಿದ ಚಿತ್ರಗಳೆಲ್ಲವೂ ನಮ್ಮ ಹೊಸ ಪ್ರಯತ್ನವಾಗಿತ್ತು. ಅದೇ ರೀತಿ ಇದೂ ಕೂಡ ಈವರೆಗೆ ನಾವು ಮಾಡಿರದ ಒಂದು ಪಾತ್ರಕ್ಕೆ ಪ್ರಾಮುಖ್ಯತೆ ಕೊಡುವ ಮಾಸ್ ಸಿನಿಮಾ. ಇದನ್ನು ಬರೆಯುವ ಮುನ್ನ ನನಗಾದ ಅನುಭವವೇ ಇದಕ್ಕೆ ಸ್ಫೂರ್ತಿ. ಮನದಲ್ಲಿದ್ದ ಸಿಟ್ಟನ್ನು ಕ್ರಿಯಾತ್ಮಕವಾಗಿ ತೆರೆಯ ಮೇಲೆ ತರುವ ಸಾಹಸ ಈ ಚಿತ್ರ. ಈ ಚಿತ್ರ ನನ್ನನ್ನು ತಂತ್ರಜ್ಞನಾಗಿಯೂ ರೂಪುಗೊಳಿಸಿದೆ.
-ರಾಜ್ ಬಿ. ಶೆಟ್ಟಿ

ಸೈಕಲ್ ಗ್ಯಾಪ್‌ನಲ್ಲಿ ಮತ್ತೊಂದು ಸಿನಿಮಾ
ಕಳೆದ ಕೆಲವು ತಿಂಗಳಿನಿಂದ ರಾಜ್ ಬಿ.ಶೆಟ್ಟಿ ರಮ್ಯಾ ನಿರ್ಮಾಣದ ಮೊದಲ ಪ್ರಾಜೆಕ್ಟ್ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ಬಿಜಿಯಿದ್ದರು. ಆ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಚಿತ್ರೀಕರಣ ಮುಗಿದಿದ್ದು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅದರ ನಡುವೆ ರಾಜ್ ಬಿ.ಶೆಟ್ಟಿ ಹೊಸ ಸಿನಿಮಾ ‘ಟೋಬಿ’ ಪೂರ್ಣಗೊಳಿಸಿ ಬಿಡುಗಡೆ ದಿನಾಂಕವನ್ನೂ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net