ರಾಹುಲ್-ಬೃಂದಾ ಡಿಕೆಡಿ ವಿಜೇತರು; ಜೀ ವಾಹಿನಿಯ ಡಾನ್ಸ್ ಶೋಗೆ ಕಲರ್​ಫುಲ್ ತೆರೆ

Dance Show
Published on

ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಶೋಗೆ ಭಾನುವಾರ ವೈಭವದ ತೆರೆ ಬಿದ್ದಿದೆ. ರಾಹುಲ್ ಮತ್ತು ಬೃಂದಾ ಈ ಸಲದ ಡಿಕೆಡಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಜೀ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ವಿಜೇತರಿಗೆ 20 ಲಕ್ಷ ರೂ. ಮೌಲ್ಯದ 30*40 ನಿವೇಶನ ಮತ್ತು 5 ಲಕ್ಷ ರೂ. ಮೊತ್ತದ ಚೆಕ್​ಅನ್ನು ಬಹುಮಾನವಾಗಿ ನೀಡಲಾಗಿದೆ. ಈ ಜೋಡಿಯ ನೃತ್ಯಕ್ಕೆ ಕೋರಿಯೋಗ್ರಾಫ್ ಮಾಡಿದ ರಾಹುಲ್ ಮಾಸ್ಟರ್​ಗೂ 5 ಲಕ್ಷ ರೂ. ಮೊತ್ತದ ಚೆಕ್ ಲಭಿಸಿದೆ. ಈ ಖುಷಿಯನ್ನು ವಿಜಯವಾಣಿ ಜತೆಗೆ ಬೃಂದಾ ಹಂಚಿಕೊಂಡಿದ್ದಾರೆ.

‘ಡಿಕೆಡಿ ಒಂದು ಸುಂದರ ಪ್ರಯಾಣ. ಎಷ್ಟೋ ಸಾವಿರ ಜನ ಈ ಶೋಗೆ ಬರಬೇಕೆಂದು ಆಡಿಷನ್ ಕೊಡುತ್ತಾರೆ. ಅದರಲ್ಲಿ ಟಾಪ್ 50ರಲ್ಲಿ ನನಗೆ ಸ್ಥಾನ ಸಿಕ್ಕಿತ್ತು. ರಾಹುಲ್ ಜತೆ ಸೇರಿ ಒಟ್ಟು 36 ವಾರ ವೇದಿಕೆ ಮೇಲೆ ಡಾನ್ಸ್ ಮಾಡಿದ್ದೇವೆ. ಇದೀಗ ನಾವೇ ವಿಜೇತರಾಗಿದ್ದೇವೆ’ ಎನ್ನುತ್ತಾರೆ. ಅದೇ ರೀತಿ ರಾಹುಲ್ ಸಹ ಖುಷಿಯಲ್ಲಿದ್ದಾರೆ. ‘ಈ ಮೊದಲು ಸಾಕಷ್ಟು ಶೋಗಳಿಗೆ ಹೋಗಿದ್ದೆ. ಆದರೆ, ಎಲ್ಲಿಯೂ ಅವಕಾಶ ಸಿಕ್ಕಿರಲಿಲ್ಲ. ಡಿಕೆಡಿ ನನ್ನ ಕೊನೇ ಶೋ ಎಂದು ಆಡಿಷನ್ ಕೊಟ್ಟೆ. ಅದಾದ ಬಳಿಕ ಎಲ್ಲವೂ ಬದಲಾಯಿತು. ಕಳೆದ 19 ವರ್ಷಗಳಿಂದ ಡಾನ್ಸ್ ಮಾಡುತ್ತಿದ್ದೇನೆ. ಎಷ್ಟೋ ಸಿನಿಮಾಗಳಿಗೆ ಹಿನ್ನೆಲೆ ನೃತ್ಯಗಾರನಾಗಿಯೂ ಕೆಲಸ ಮಾಡಿದ್ದೇನೆ. ಇದೀಗ ಈ ಗೆಲುವು ದೊಡ್ಡ ಕನಸನ್ನು ನನಸು ಮಾಡಿದೆ’ ಎನ್ನುತ್ತಾರೆ.

ಫಿನಾಲೆಗೆ ಏಳು ಜೋಡಿ: ರಾಹುಲ್- ಬೃಂದಾ, ವಿಕ್ರಮ್ ಶಿಫಾಲಿ, ಸೂರ್ಯ ತೇಜ- ಅಮೂಲ್ಯ, ದರ್ಶನ್- ರಕ್ಷಿತ, ಲಿಖಿತ್- ಸಾನಿಧ್ಯ, ರಿತಿಕಾ (ಸೋಲೋ ಫರ್ಫಾಮನ್ಸ್), ರೋಷನಿ- ಇಬ್ರಾಹಿಂ ಫಿನಾಲೆಯಲ್ಲಿದ್ದರು. ಈ ಪೈಕಿ ರಾಹುಲ್ ಮತ್ತು ಬೃಂದಾ ಈ ಸೀಸನ್​ನ ವಿಜೇತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net