'ಬಿಂಗೊ' ಎನ್ನುತ್ತಿದ್ದಾರೆ ರಾಗಿಣಿ; ಹೊಸ ಚಿತ್ರದಲ್ಲಿ ನಟನೆ

Bingo - Ragini
Published on

ಬೆಂಗಳೂರು: 'ಸಾರಿ - ಕರ್ಮ ರಿಟರ್ನ್ಸ್​' ಎಂಬ ಚಿತ್ರದ ನಂತರ ರಾಗಿಣಿ ಇನ್ನೊಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಂಕರ್​ ಕೋನಮಾನಹಳ್ಳಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರಾಗಿಣಿ ನಟಿಸುತ್ತಿದ್ದಾರೆ. ಹಾಗಂತ ಅವರು ನಾಯಕಿ ಅಲ್ಲ. ಚಿತ್ರದಲ್ಲಿ ಆರು ಪ್ರಮುಖ ಪಾತ್ರಗಳಿದ್ದು, ಅದರಲ್ಲಿ ಒಂದು ಪಾತ್ರವನ್ನು ರಾಗಿಣಿ ಮಾಡುತ್ತಿದ್ದಾರೆ.

ಅಂದಹಾಗೆ, ಈ ಚಿತ್ರದ ಹೆಸರು 'ಬಿಂಗೊ'. ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ನಿರ್ಮಿಸುತ್ತಿರುವ ಈ ಚಿತ್ರ ಇತ್ತೀಚೆಗೆ ಸೆಟ್ಟೇರಿದೆ.

ಪ್ರಮುಖ ಪಾತ್ರ ಎಂದರೆ ಎಂಥಾ ಪಾತ್ರ. ಈ ಪ್ರಶ್ನೆಗೆ ರಾಗಿಣಿ ಉತ್ತರಿಸುವುದಿಲ್ಲ. ಪಾತ್ರದ ಕುರಿತು ಕೇಳಿದರೆ ಹಾಗೆಯೇ ತೇಲಿಸುವ ಅವರು, 'ಈ ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಪಾತ್ರದ ಕುರಿತು ಹೆಚ್ಚು ಹೇಳುವ ಹಾಗಿಲ್ಲ. ಮುಂದಿನ ದಿನಗಳಲ್ಲಿ ನನ್ನ ಪಾತ್ರದ ಬಗ್ಗೆ ಮಾಹಿತಿ ನೀಡುತ್ತೇನೆ. ಒಟ್ಟಿನಲ್ಲಿ ನಾನು ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ಸ್ವಲ್ಪ ವಿಭಿನ್ನ ಅಂತ ಹೇಳಬಹುದು' ಎಂದಷ್ಟೇ ಹೇಳುತ್ತಾರೆ ರಾಗಿಣಿ.

'ಬಿಂಗೊ' ಕುರಿತು ಮಾತನಾಡುವ ನಿರ್ದೇಶಕ ಶಂಕರ್​, 'ಇದು ನನ್ನ ನಿರ್ದೇಶನದ ಎರಡನೇ ಚಿತ್ರ. ನನ್ನ ನಿರ್ದೇಶನದ ಮೊದಲ ಚಿತ್ರ 'ಶಂಭೋ ಶಿವ ಶಂಕರ" ಸದ್ಯದಲ್ಲೇ ಬಿಡುಗಡೆಯಾಗಲಿದೆ. 'ಬಿಂಗೊ' ಪದಕ್ಕೆ ಹಲವು ಅರ್ಥಗಳಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂದು ಹೇಳಬಹುದು. ಆರು ಮುಖ್ಯಪಾತ್ರಗಳಿರುತ್ತದೆ. ಅದರಲ್ಲಿ ಅತೀ ಮುಖ್ಯಪಾತ್ರದಲ್ಲಿ ರಾಗಿಣಿ ಅವರು ಅಭಿನಯಿಸುತ್ತಿದ್ದಾರೆ. ಅರ್ ಕೆ ಚಂದನ್ ನಾಯಕನಾಗಿ, ರಕ್ಷಾ ನಿಂಬರ್ಗಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಜೇಶ್ ನಟರಂಗ, ಪವನ್ (ಮಜಾ ಟಾಕೀಸ್), ಮುರಳಿ ಪೂರ್ವಿಕ್, ಅಪೂರ್ವ, ಆಶಾ ಸುಜಯ್, ಶ್ರವಣ್, ವಿದ್ಯಾ, ಕುಮಾರ್ ಮುಂತಾದವರು ನಟಿಸಲಿದ್ದಾರೆ' ಎನ್ನುತ್ತಾರೆ.

'ಬಿಂಗೊ' ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲೇ ಸಂಪೂರ್ಣವಾಗಿ ನಡೆಯಲಿದೆಯಂತೆ. ಚಿತ್ರಕ್ಕೆ ಹಿತನ್​ ಹಾಸನ್​ ಅವರ ಸಂಗೀತ ಮತ್ತು ನಟರಾಜ್ ಮುದ್ದಾಲ್ ಛಾಯಾಗ್ರಹಣ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net