ಜೈಲು ಪಾಲಾದ ಮೂರನೆಯ ನಟಿ ರಾಗಿಣಿ ...

Ragini Dwivedi - Final
Published on

ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟಿ ರಾಗಿಣಿ ದ್ವಿವೇದಿ ಇಂದು ಜೈಲು ಪಾಲಾಗಿದ್ದಾರೆ. ಡ್ರಗ್ಸ್​ ಕೇಸಿನಲ್ಲಿ ರಾಗಿಣಿ ಮತ್ತು ನಾಲ್ವರ್​ ಡ್ರಗ್​ ಪೆಡ್ಲರ್​ಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ಹೀಗೆ ಜೈಲುವಾಸ ಅನುಭವಿಸುತ್ತಿರುವ ಮೂರನೆಯ ಕನ್ನಡದ ನಟಿ ರಾಗಿಣಿ ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ, 'ಓಕೆ ಸಾರ್​ ಓಕೆ' ಮತ್ತು 'ಏಕದಂತ' ಚಿತ್ರಗಳಲ್ಲಿ ನಟಿಸಿದ್ದ ಮೋನಿಕಾ ಮರಿಯಾ ಸೂಸೈರಾಜ್​ ಅವರು ಮುಂಬೈನ ನೀರಜ್​ ಗ್ರೋವರ್​ ಮರ್ಡರ್​ ಕೇಸ್​ನಲ್ಲಿ ಜೈಲುವಾಸ ಅನುಭವಿಸಿದ್ದರು. ಇದಲ್ಲದೆ ನಟಿ ಯಮುನಾ ಅವರನ್ನು ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೋಟೆಲ್​ನಲ್ಲಿ ವೇಶ್ಯಾವಟಿಕೆ ಜಾಲದಲ್ಲಿ ಪೊಲೀಸರು ಬಂಧಿಸಿದ್ದರು.

ಇದೀಗ ಡ್ರಗ್ಸ್​ ಕೇಸ್​ನಲ್ಲಿ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಸುಮಾರು 10 ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿದ್ದ ನಟಿಯರನ್ನು ಸಾಕಷ್ಟು ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು, ಸೋಮವಾರ ಸಂಜೆ ವಿಡಿಯೋ ಕಾನ್ಫರೆನ್ಸ್​ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.

ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಧೀಶರು ರಾಗಿಣಿ ಮತ್ತು ಅವರ ಜತೆಗೆ ಐವರು ಡ್ರಗ್ಸ್​ ಪೆಡ್ಲರ್​ಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ. ಅದರ ಪ್ರಕಾರ, ಸೆಪ್ಟೆಂಬರ್​ 28ರವರೆಗೆ ರಾಗಿಣಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಬೇಕಿದೆ.

ಇನ್ನು ಸಂಜನಾ ಅವರನ್ನು ಮತ್ತಷ್ಟು ವಿಚಾರಣೆ ನಡೆಸಬೇಕಿರುವ ಕಾರಣ, ಕಸ್ಟಡಿಗೆ ಒಪ್ಪಿಸುವಂತೆ ಸಿಸಿಬಿ ಮನವಿ ಮಾಡಿತ್ತು. ಇದಕ್ಕೆ ಒಪ್ಪಿದ ನ್ಯಾಯಾಧೀಶರು, ಸಂಜನಾ ಅವರನ್ನು ಮತ್ತೆ ಮೂರು ದಿನ ಸಿಸಿಬಿ ಕಸ್ಟಡಿಗೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net