ರಾಗಿಣಿ ಈಗ ಶಾನುಭೋಗರ ಮಗಳು; ಲಾ ಬಳಿಕ ಮತ್ತೆ ಬಂದ ಮಿಸಸ್ ಪ್ರಜ್ವಲ್

Ragini Chandran
Published on

ಬೆಂಗಳೂರು: ಸಾಮಾನ್ಯವಾಗಿ ನಟಿಯರು ಮದುವೆಯ ಬಳಿಕ ಚಿತ್ರರಂಗದಿಂದಲೇ ದೂರಾಗುತ್ತಾರೆ ಅಥವಾ ಪೋಷಕ ಪಾತ್ರಗಳಿಗೆ ಸೀಮಿತವಾಗುತ್ತಾರೆ. ಆದರೆ, ಮದುವೆಯ ಬಳಿಕ ನಾಯಕಿಯಾಗಿ ಪದಾರ್ಪಣೆ ಮಾಡಿದವರು ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್. 2019ರಲ್ಲಿ ‘ಲಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಾಗಿಣಿ, ಆ ಬಳಿಕ ಮತ್ತೆ ನಾಯಕಿಯಾಗಿ ಕಾಣಿಸಿಕೊಂಡಿರಲಿಲ್ಲ. ಕೋಡ್ಲು ರಾಮಕೃಷ್ಣ ನಿರ್ದೇಶಿಸುತ್ತಿರುವ ‘ಶಾನುಭೋಗರ ಮಗಳು’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ರಾಗಿಣಿ ಅಭಿನಯಕ್ಕೆ ವಾಪಸ್ಸಾಗಿದ್ದಾರೆ.

‘ಶಾನುಭೋಗರ ಮಗಳು’, ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಚಿತ್ರ. ಇದು ಸ್ವಾತಂತ್ರಪೂರ್ವದ ಕಥೆ ಎಂಬುದು ವಿಶೇಷ. ರಾಗಿಣಿ ಪ್ರಜ್ವಲ್ ಜತೆ ಮೇಘಶ್ರೀ, ನಿರಂಜನ್ ಕುಮಾರ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಶಂಕರ್ ಅಶ್ವತ್ಥ್, ನೀನಾಸಂ ಅಶ್ವತ್ಥ್ ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ಟಿಪು್ಪ ಸುಲ್ತಾನ್ ಪಾತ್ರ ಸಹ ಇದ್ದು, ಸೂಕ್ತ ಪಾತ್ರಧಾರಿಗೆ ಹುಡುಕಾಟ ನಡೆದಿದೆ.

ಈ ಚಿತ್ರಕ್ಕೆ ಬಿ.ಎ. ಮಧು ಚಿತ್ರಕಥೆ, ಸಂಭಾಷಣೆ ಬರೆಯುತ್ತಿದ್ದು, ಜೈ ಆನಂದ್ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಹಾಗೂ ವಸಂತ್ ರಾವ್ ಕಲಾನಿರ್ದೇಶನವಿರಲಿದೆ. ಸೆಪ್ಟೆಂಬರ್ ಕೊನೆಯ ವಾರದಿಂದ ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net