

ರಾಘವೇಂದ್ರ ರಾಜಕುಮಾರ್ ಕಳೆದ ಎರಡು ವರ್ಷಗಳಿಂದ ಹಲವು ಚಿತ್ರಗಳಲ್ಲಿ ನಟಿಸುತ್ತಲೇ ಇದ್ದಾರೆ. 'ಅಮ್ಮನ ಮನೆ' ನಂತರ 'ತ್ರಯಂಬಕಂ', 'ವಾರ್ಡ್ ನಂ 11', 'ಪೊಗರು', 'ಆಡಿಸಿದಾತ' ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿರುವ ಅವರು, ಇದೀಗ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅದೇ 'ರಾಜತಂತ್ರ'.
ಬಹುಶಃ ಕರೊನಾ ಹಾವಳಿ ಮತ್ತು ಲಾಕ್ಡೌನ್ ಇಲ್ಲದಿದ್ದರೆ, ಇಷ್ಟರಲ್ಲಿ ಚಿತ್ರೀಕರಣ ಪ್ರಾರಂಭವಾಗಿರಬೇಕಿತ್ತು. ಆದರೆ, ಸ್ವಲ್ಪ ತಡವಾಯಿತು. ಇದೀಗ ಚಿತ್ರೀಕರಣ ಮಾಡುವುದಕ್ಕೆ ಸರ್ಕಾರ ಅನುಮತಿ ಕೊಟ್ಟಿರುವುದರಿಂದ, ಸೆಪ್ಟೆಂಬರ್ನಿಂದ 'ರಾಜತಂತ್ರ' ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.
ಅದಕ್ಕೂ ಮುನ್ನ ಭಾನುವಾರ, ಚಿತ್ರದ ಮೋಷನ್ ಪೋಸ್ಟರ್ನ್ನು ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ರಾಘವೇಂದ್ರ ರಾಜಕುಮಾರ್ ಅವರ ಮನೆಯಲ್ಲೇ ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಅವರ ಭಾವಚಿತ್ರದ ಮುಂದೆ ಪೋಸ್ಟರ್ ಅನಾವರಣಗೊಂಡಿದೆ. ಈ ಸಂದರ್ಭದಲ್ಲಿ ವಿನಯ್ ರಾಜಕುಮಾರ್ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಭಾಗವಹಿಸಿದ್ದರು.
ಏನಿದು 'ರಾಜತಂತ್ರ' ಎಂಬ ಪ್ರಶ್ನೆ ಬರದೇ ಇರದು. ಸಮಾಜಕ್ಕೆ ಮತ್ತು ದೇಶಕ್ಕೆ ಕಂಟಕವಾಗಿರುವ ದುಷ್ಟಶಕ್ತಿಗಳನ್ನು ತನ್ನ ಬುದ್ಧಿಶಕ್ತಿ ಮತ್ತು ತಂತ್ರಗಾರಿಕೆಯಿಂದ ಮಣಿಸುವ ವಿಭಿನ್ನ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ನಟಿಸುತ್ತಿದ್ದು, ಅದೇ ಕಾರಣಕ್ಕೆ ಚಿತ್ರಕ್ಕೆ 'ರಾಜತಂತ್ರ' ಎಂಬ ಹೆಸರನ್ನು ಇಡಲಾಗಿದೆ.
ಇದನ್ನೂ ಓದಿ: ಕನ್ನಡದಲ್ಲೂ ವಿದ್ಯಾಸುಂದರಿ ಬೆಂಗಳೂರು ನಾಗರತ್ಮಮ್ಮ
ಈ ಹಿಂದೆ 'ಅಮ್ಮನ ಮನೆ' ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪಿ.ವಿ.ಆರ್. ಸ್ವಾಮಿ, ಈ ಚಿತ್ರದ ಛಾಯಾಗ್ರಹಣದ ಜತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಜೆ.ಎಂ.ಪ್ರಹ್ಲಾದ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಹಾಡುಗಳನ್ನು ಬರೆದಿದ್ದಾರೆ.