ಚೆನೈ : ಇತ್ತೀಚಿನ ದಿನಗಳಲ್ಲಿ ಸಾಮಾನ್ಯರ ಸೋಶಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆಗುವುದು ಸಹಜವಾಗಿದೆ. ಇದರ ಜತೆಗೆ ಸೆಲೆಬ್ರಿಟಿಗಳ ಸೋಶಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆಗುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಈಗ ನಟಿ ರಾಧಿಕಾ ಶರತ್‌ಕುಮಾರ್ ಕೂಡಾ ಸೈಬರ್ ಹ್ಯಾಕಿಂಗ್‌ಗೆ ತುತ್ತಾಗಿದ್ದಾರೆ. ರಾಧಿಕಾ ಶರತ್‌ಕುಮಾರ್ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಅವರ ಪುತ್ರಿ ರಯಾನೆ ಮಿತುನ್ ಬಹಿರಂಗಪಡಿಸಿದ್ದಾರೆ. ಹಾಗಾಗಿ, ರಾಧಿಕಾ ಶರತ್‌ಕುಮಾರ್ ಟ್ವಿಟರ್ ಅನುಯಾಯಿಗಳಿಗೆ ಎಚ್ಚರಿಕೆ ನೀಡಲು, "@realradikaa ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಆದ್ದರಿಂದ, ರಾಧಿಕಾ ಅವರ ಖಾತೆಯಿಂದ ಕಳುಹಿಸಲಾದ ಯಾವುದೇ ಸಂದೇಶಗಳನ್ನು ನೋಡಬೇಡಿ. (sic)" ಎಂದು ಪುತ್ರಿ ರಯಾನೆ ಟ್ವೀಟ್ ಮಾಡಿದ್ದಾರೆ.
ನಟಿ ಮತ್ತು ರಾಜಕಾರಣಿ ಖುಷ್ಬು ಕೂಡಾ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ರಾಧಿಕಾ ಈ ವಿಷಯದ ಬಗ್ಗೆ ಸೈಬರ್ ಪೊಲೀಸರ ಬಳಿ ದೂರು ನೀಡಿದ್ದಾರೆ ಮತ್ತು ಅದನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ. ರಾಧಿಕಾ ಶರತ್‌ಕುಮಾರ್ ಅವರು ಕೊನೆಯದಾಗಿ ತಮ್ಮ ಟ್ವಿಟರ್ ಖಾತೆಯಿಂದ ಭಾನುವಾರ ಎರಡು ಪೋಸ್ಟ್ಗಳನ್ನು ಮಾಡಿದ್ದಾರೆ. ಒಂದು ಪೋಸ್ಟ್ನಲ್ಲಿ ರಾಧಿಕಾ ಶರತ್‌ಕುಮಾರ್ ಕ್ರಿಸ್ಮಸ್ ಸೀಸನ್ ಆಗಿರುವುದರಿಂದ ಮನೆಯಲ್ಲಿ ಅಲಂಕಾರ ಮಾಡಿರುವ ಕ್ರಿಸ್ಮಸ್ ಟ್ರೀ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್ನು, ರಾಧಿಕಾ ತಮ್ಮ ಎರಡನೆ ಪೋಸ್ಟ್ನಲ್ಲಿ ನಟ ಅಜಿತ್ ಕುಮಾರ್ ಅವರ 'ವಲಿಮೈ' ಸಿನಿಮಾದ ತಾಯಿ ಹಾಡಿನ ಬಗ್ಗೆ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿಕೊಂಡಿದ್ದಾರೆ.