ರಕ್ತ ಚರಿತ್ರ ಚಿತ್ರದಲ್ಲಿ ಶೋಷಣೆಗೊಳಗಾಗಿದ್ದೆ ಎಂದು ರಹಸ್ಯ ಬಿಚ್ಚಿಟ್ಟ ರಾಧಿಕಾ

Radhika Apte - Final
Published on

ಮುಂಬೈ: ಬಾಲಿವುಡ್​ನ ಜನಪ್ರಿಯ ನಟಿಯರಲ್ಲಿ ರಾಧಿಕಾ ಆಪ್ಟೆ ಸಹ ಒಬ್ಬರು. 2005ರಲ್ಲಿ ಬಿಡುಗಡೆಯಾದ ವಾಹ್​! ಲೈಫ್​ ಹೋ ತೋ ಐಸಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಧಿಕಾ, ರಾಮ್​ಗೋಪಾಲ್​ ವರ್ಮಾ ನಿರ್ದೇಶನದ ರಕ್ತ ಚರಿತ್ರ ಚಿತ್ರದಲ್ಲಿ ನಟಿಸುವಾಗ ಸಾಕಷ್ಟು ಶೋಷಣೆಗೊಳಗಾಗಿದ್ದರಂತೆ. ಹಾಗಂತ ಅವರೇ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ರಾಮ್​ಗೋಪಾಲ್​ ವರ್ಮ ದೊಡ್ಡ ನಿರ್ದೇಶಕರು, ಅವರ ಜತೆಗೆ ಕೆಲಸ ಮಾಡುವುದೇ ಒಂದು ಅದೃಷ್ಟ ಎಂದು ನಂಬಿದ್ದ ರಾಧಿಕಾ, ಚಿತ್ರೀಕರಣ ಸಮಯದಲ್ಲಿ ಸಾಕಷ್ಟು ಶೋಷಣೆಗೊಳಗಾಗಿದ್ದರ ಬಗ್ಗೆ ಮಾತನಾಡಿದ್ದಾರೆ.

ನನಗೆ ಆ ಚಿತ್ರಕ್ಕೆ ಕೊಟ್ಟ ಸಂಭಾವನೆ ಬಹಳ ಕಡಿಮೆ. ಮೊದಲಿಗೆ, ಬರೀ ಒಂದೇ ಚಿತ್ರ ಎಂದು ಹೇಳಿದ್ದರು. ಆ ನಂತರ ತೆಲುಗು ಮತ್ತು ತಮಿಳು ಸಂಭಾಷಣೆಗಳನ್ನು ಸಹ ಕೊಟ್ಟು, ಅದನ್ನೂ ಹೇಳಿಸಿದರು. ಇನ್ನು, ಚಿತ್ರದಲ್ಲಿ ದೊಡ್ಡದೊಡ್ಡ ಕಲಾವಿದರು ಅಭಿನಯಿಸಿದ್ದರಿಂದ, ಯಾವತ್ತೂ ಹೇಳಿದ ಸಮಯಕ್ಕೆ ಚಿತ್ರೀಕರಣ ಪ್ರಾರಂಭವಾಗುತ್ತಿರಲಿಲ್ಲ. ಎಷ್ಟೊತ್ತಿಗೋ ಚಿತ್ರೀಕರಣ ಶುರುವಾಗುತ್ತಿತ್ತು. ನಾವೆಲ್ಲ ಬಂದು ಸುಮ್ಮನೆ ಕಾಯಬೇಕಿತ್ತು. ಒಂದು ಹಂತದಲ್ಲಿ ಇವೆಲ್ಲ ಬೇಕಾ? ಅಂತಲೂ ಅನಿಸಿಬಿಟ್ಟಿತ್ತು ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ.

ಆದರೆ, ಅವೆಲ್ಲವನ್ನೂ ರಾಧಿಕಾ ಸುಮ್ಮನೆ ಸಹಿಸಿಕೊಂಡರಂತೆ. ಅದಕ್ಕೆ ಕಾರಣ ರಾಮ್​ಗೋಪಾಲ್​ ವರ್ಮಾ. ನಾನು ಆರ್​ಜಿವಿ ಅವರ ದೊಡ್ಡ ಫ್ಯಾನ್​. ಅವರ ರಂಗೀಲಾ ಮತ್ತು ಸತ್ಯ ನನ್ನ ಫೇವರೇಟ್​ ಚಿತ್ರಗಳು. ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿದ್ದೇ ದೊಡ್ಡದು ಅಂತ ಸುಮ್ಮನಿದ್ದೆ. ಆ ಸಮಯದಲ್ಲಿ ನಾನು ಬಹಳ ಮುಗ್ಧವಾಗಿದ್ದೆ. ಅದೇ ಕಾರಣಕ್ಕೆ, ಅವೆಲ್ಲವನ್ನೂ ಸಹಿಸಿಕೊಂಡು ಬಂದೆ. ಇಷ್ಟೆಲ್ಲ ಶೋಷಣೆಗೊಳಗಾಗಿದ್ದರಿಂದ, ನಾನು ಬಹಳಷ್ಟು ಪಾಠಗಳನ್ನು ಕಲಿತೆ ಎಂದು ರಾಧಿಕಾ ಹೇಳಿಕೊಂಡಿದ್ದಾರೆ.

ಆಂಧ್ರದ ರಾಜಕಾರಣಿ ಪೆರಿಟಾಲ ರವಿ ಅವರ ಜೀವನವನ್ನಾಧರಿಸಿದ ಈ ಚಿತ್ರದಲ್ಲಿ ವಿವೇಕ್​ ಒಬೆರಾಯ್​, ಸೂರ್ಯ, ಸುದೀಪ್​, ಪ್ರಿಯಾಮಣಿ, ಶತ್ರುಘ್ನ ಸಿನ್ಹಾ ಮುಂತಾದವರು ನಟಿಸಿದ್ದರು. ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net