ರಾಕಿ ಭಾಯ್ ಗಡ್ಡಕ್ಕೆ ಮುಕ್ತಿ ಯಾವಾಗ? ಕೆಜಿಎಫ್-2 ಬಗ್ಗೆ ಯಶ್ ಹೇಳಿದ್ದೇನು....?

Yash
Published on

ಬೆಂಗಳೂರು: ಕೆಜಿಎಫ್ ಚಿತ್ರ ಪೂರ್ಣಗೊಳ್ಳುತ್ತಿದ್ದಂತೆಯೇ ನಟ ಯಶ್ ಇನ್ನೇನು ಗಡ್ಡ ತೆಗೆದುಬಿಡುತ್ತಾರೆ ಎಂದು ಬಹಳಷ್ಟು ಜನ ಅಂದುಕೊಂಡಿದ್ದರು. ಆದರೆ ಕೆಜಿಎಫ್ ಬಿಡುಗಡೆಯಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿ ಹಳತಾದರೂ ರಾಕಿ ಭಾಯ್ ಗಡ್ಡಕ್ಕೆ ಮಾತ್ರ ಮುಕ್ತಿ ಇನ್ನೂ ಸಿಕ್ಕಿಲ್ಲ. ಹಾಗಾದರೆ ಅದಕ್ಕೆ ಸದ್ಯದ ಭವಿಷ್ಯದಲ್ಲಿ ಮುಕ್ತಿ ಸಿಗುವ ಸಂಭವವೇನಾದರೂ ಇದೆಯೇ?

ಇದು ನಟ ಯಶ್ ಅವರ ಬಹಳಷ್ಟು ಅಭಿಮಾನಿಗಳ ಪ್ರಶ್ನೆ. ಇದೇ ಪ್ರಶ್ನೆಯನ್ನು ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಪಾನಿಪುರಿ ಕಿಟ್ಟಿ ಹೋಟೆಲ್ ಉದ್ಘಾಟನಾ ಸಮಾರಂಭದಲ್ಲಿ ಸುದ್ದಿಗಾರರು ಯಶ್ ಅವರನ್ನು ಕೇಳಿದರು. ‘‘ನಾನು ಗಡ್ಡ ಬಿಟ್ಟಿದ್ದು ಈಗಲ್ಲ, ನನ್ನ ಆರಂಭಿಕ ಸಿನಿಮಾಗಳಲ್ಲಿಯೂ ಗಡ್ಡ ಇದೆ. ಇಷ್ಟಲ್ಲದಿದ್ದರೂ ಟ್ರಿಮ್ ಮಾಡಿದ ಗಡ್ಡವಾದರೂ ಇರುತ್ತಿತ್ತು. ಈ ಉದ್ದನೆ ಗಡ್ಡಕ್ಕೆ ಮುಕ್ತಿ ಯಾವಾಗ ಅಂತ ನನಗೇ ಗೊತ್ತಿಲ್ಲ, ನೋಡೋಣ...’’ ಎಂದು ಯಶ್ ಉತ್ತರಿಸಿದರು.

ಕೆಜಿಎಫ್ 2ನಲ್ಲಿ ಎಲ್ಲ ಭಾಷೆಗಳಲ್ಲಿಯೂ ಡಬ್ಬಿಂಗ್ ನೀವೇ ಮಾಡ್ತೀರಾ ಎಂಬ ಪ್ರಶ್ನೆಗೆ, ‘‘ಆ ಅರ್ಧ ಭಾಗದಲ್ಲಿ ಬೇರೆ ಧ್ವನಿ ಇದ್ದು, ಈ ಭಾಗದಲ್ಲಿ ನನ್ನ ಧ್ವನಿ ಇದ್ದರೆ ಆ ಭಾಷೆಯವರಿಗೆ ಕಿರಿಕಿರಿ ಅನ್ನಿಸಬಹುದು. ನಾನೇ ಎಲ್ಲ ಭಾಷೆಗಳಲ್ಲಿಯೂ ಡಬ್ಬಿಂಗ್ ಮಾಡಬೇಕು ಎಂಬುದು ಕಲಾವಿದನಾಗಿ ನನ್ನ ಆಸೆ. ಕಳೆದ ಬಾರಿ, ಮೊದಲ ಭಾಗ ಬಂದಾಗ, ನಾನೇ ಮಾಡಬೇಕೆಂದಿದ್ದರೂ ಸಾಕಷ್ಟು ಸಮಯ ಇರಲಿಲ್ಲ, ಎಲ್ಲರಿಗೂ ಕಾನ್ಫಿಡೆನ್ಸ್ ಇರಲಿಲ್ಲ... ಹೀಗೆ ಏನೇನೋ ಸಮಸ್ಯೆಗಳಿದ್ದವು. ಹಾಗಾಗಿ ಆಗ ಬೇರೆಬೇರೆಯವರು ಡಬ್ ಮಾಡಿದರು. ಈ ಸಲ ನಾನೇ ಎಲ್ಲ ಭಾಷೆಗಳಲ್ಲಿ ಮಾಡಿದರೆ ತಪ್ಪಾಗುತ್ತದೆ. ಮುಂದಿನ ಬೇರೆ ಚಿತ್ರದಲ್ಲಿ ನೋಡೋಣ’’ ಎಂದು ಯಶ್ ಹೇಳಿದರು.

ಪಾನಿ ಪುರಿ ಕಿಟ್ಟಿ ಹೋಟೆಲ್‌ನಲ್ಲಿ ಯಾವಾಗ ರುಚಿ ನೋಡುತ್ತೀರಿ, ಅಥವಾ ಡಯಟ್‌ನಲ್ಲಿ ಇದ್ದೀರಾ ಎಂಬ ಪ್ರಶ್ನೆಗೆ, ‘‘ನಾನೇನು ಸಂಪೂರ್ಣ ಡಯಟ್‌ನಲ್ಲಿ ಯಾವಾಗಲೂ ಇರಲ್ಲ, ಶೂಟಿಂಗ್ ಸಮಯದಲ್ಲಿ ಮಾತ್ರ ಸ್ವಲ್ಪ ಡಯಟ್ ಮಾಡ್ತಿರ್ತೀನಿ. ಆನ್ ಆ್ಯಂಡ್ ಆಫ್ ಇದ್ದೇ ಇರುತ್ತೆ ಡಯಟ್. ಇಲ್ಲಿಯೂ ಅಷ್ಟೇ. ನೆಕ್ಟ್ಸ್ ಟೈಮ್ ಫ್ರೀ ಮಾಡ್ಕೊಂಡು ಬಂದು ಇಲ್ಲಿಯೂ ರುಚಿ ನೋಡುತ್ತೇನೆ...’’ ಎಂದು ಯಶ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net