

ಬೆಂಗಳೂರು: ‘ಬಿಗ್ ಬಾಸ್ ಒಟಿಟಿ ಕನ್ನಡ’ದ ಮೊದಲ ಸೀಸನ್ಗೆ ಶನಿವಾರ ರಾತ್ರಿ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಮೊದಲ ದಿನದ ವರ್ಣರಂಜಿತ ಕಾರ್ಯಕ್ರಮದಲ್ಲಿ ಈ ಸೀಸನ್ನಲ್ಲಿ ಭಾಗವಹಿಸುತ್ತಿರುವ ಎಲ್ಲ 16 ಸ್ಪರ್ಧಿಗಳನ್ನು ನಿರೂಪಕ ಸುದೀಪ್, ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಇಂದಿನಿಂದ ಬಿಗ್ ಬಾಸ್ ಒಟಿಟಿ ಕನ್ನಡದ ಅಸಲಿ ಆಟ ಆರಂಭವಾಗಲಿದೆ.
ಓಟಿಟಿಯ ಮೊದಲ ಸೀಸನ್ನಲ್ಲಿ ಯುವಪೀಳಿಗೆಯನ್ನು ರೀಚ್ ಆಗುವ, ಸೋಷಿಯಲ್ ಮೀಡಿಯಾ ಬಗ್ಗೆ ಅರಿವಿರುವವರನ್ನೇ ಮನೆ ಒಳಗೆ ಬಿಡಲಾಗಿದೆ. ನಟರಾದ ರಾಕೇಶ್ ಅಡಿಗ, ಚೈತ್ರಾ ಹಳ್ಳಿಕೇರಿ, ಸಾನಿಯಾ ಅಯ್ಯರ್, ರೂಪೇಶ್ ಶಟ್ಟಿ, ಅರ್ಜುನ್ ರಮೇಶ್, ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್, ಪತ್ರಕರ್ತ ಸೋಮಣ್ಣ ಮಾಚಿಮಾಡ, ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿರುವ ಸೋನು ಶ್ರೀನಿವಾಸ ಗೌಡ, ಸ್ಪೂರ್ತಿ ಗೌಡ, ಕಿರಣ್ ಯೋಗೇಶ್ವರ್, ಲೋಕೇಶ್, ಉದಯ್ ಸೂರ್ಯ, ಅಕ್ಷತಾ ಕುಕ್ಕಿ, ಜಶ್ವಂತ್-ನಂದು ಮತ್ತು ಜಯಶ್ರೀ ಆರಾಧ್ಯ ಸ್ಪರ್ಧಿಗಳಾಗಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಜಾಲತಾಣದಲ್ಲಿ ಅಲ್ಲೋಲ ಕಲ್ಲೋಲ
ಇತ್ತ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಅತ್ತ ಸಾಮಾಜಿಕ ಜಾಲತಾಣದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಅದಕ್ಕೆ ಕಾರಣ ಸ್ಪರ್ಧಿಯೊಬ್ಬರ ಎಂಟ್ರಿ. ಆ ಸ್ಪರ್ಧಿ ಯಾರು ಅಂದರೆ, ಸೋನು ಶ್ರೀನಿವಾಸ್ ಗೌಡ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಹಾಗೂ ಟ್ರೋಲಿಗರ ಕೆಂಗಣ್ಣಿಗೆ ಯಾವಾಗಲೂ ಗುರಿಯಾಗುವ ಸೋನು ಶ್ರೀನಿವಾಸ್ ಗೌಡ ಬಿಗ್ಬಾಸ್ ಒಟಿಟಿ ಕನ್ನಡದ ಎರಡನೇ ಸ್ಪರ್ಧಿಯಾಗಿ ಮನೆಯೊಳಗೆ ಪ್ರವೇಶ ಮಾಡಿದರು. ಅತ್ತ ಅವರ ವೇದಿಕೆಗೆ ಆಗಮಿಸುತ್ತಿದ್ದಂತೆ ಜಾಲತಾಣದಲ್ಲಿ ಆಕ್ರೋಶ ಸುರಿಮಳೆಯೇ ಸುರಿಯುತ್ತಿದೆ. ಅದರಲ್ಲೂ ಟ್ರೋಲಿಗರ ಹೊಟ್ಟೆಗೆ ಬೆಂಕಿ ಇಟ್ಟಂತಾಗಿದೆ.
ಇಂತವರನೆಲ್ಲ ಅದು ಹೇಗೆ ಬಿಗ್ಬಾಸ್ ಮನೆಯೊಳಗೆ ಕಳುಹಿಸುತ್ತೀರಾ? ಆಕೆ ಮಾಡಿರುವುದಾದರೂ ಏನು? ಅವಳಿಂದ ಸಿಗುವ ಸ್ಫೂರ್ತಿ ಎಂಥದ್ದು? ಎಂದೆಲ್ಲಾ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಸೋನು ಎಂಟ್ರಿಗೆ ಕೆಲ ನೆಟ್ಟಿಗರು ಬಿಗ್ಬಾಸ್ ಅನ್ನು ಶಪಿಸುತ್ತಿದ್ದಾರೆ. ಬಿಗ್ಬಾಸ್ ಮೇಲಿನ ಗೌರವವನ್ನೇ ಹಾಳು ಮಾಡಿಕೊಂಡಿರಿ. ಅಶ್ಲೀಲವಾಗಿ ನಡೆದುಕೊಳ್ಳುವ ಸೋನುಳನ್ನು ಬಿಗ್ಬಾಸ್ ಮನೆಯೊಳಗೆ ಕಳುಹಿಸಿ ಕಾರ್ಯಕ್ರಮ ಜನಪ್ರಿಯತೆಯನ್ನು ಮಣ್ಣುಪಾಲು ಮಾಡಿಕೊಂಡಿರಿ ಎಂದು ಅಸಮಾಧಾನ ಹೊರಹಾಕಿದ್ದಾರೆ. ಬಿಗ್ಬಾಸ್ಗೆ ಅವಳು ಅರ್ಹ ಸ್ಪರ್ಧಿಯಲ್ಲ. ನಿಜವಾಗಿಯೂ ತುಂಬಾ ನಿರಾಶದಾಯಕ ಆಯ್ಕೆ.
ಸುದೀಪ್ ಅಭಿಮಾನಿಗಳ ಆಕ್ರೋಶ
ಸೋನು ಎಂಟ್ರಿಗೆ ಸುದೀಪ್ ಅಭಿಮಾನಿಗಳು ಕೂಡ ಆಕ್ರೋಶ ಹೊರಹಾಕಿದ್ದಾರೆ. ಸುದೀಪ್ ಸರ್ ಮನೆಯ ಗೇಟಿನ ಮುಂದೆ ನಿಲ್ಲೋಕು ಯೋಗ್ಯತೆ ಇಲ್ಲದವರೆನ್ನೆಲ್ಲ ಅವರ ಜೊತೆ ವೇದಿಕೆ ಮೇಲೆ ನಿಲ್ಲಿಸಿದರಲ್ಲ ಆ ದರಿದ್ರ ಆಯ್ಕೆ ತಂಡಕ್ಕೆ ಇಲ್ಲಿಂದಾನೆ ದೊಡ್ಡ ನಮಸ್ಕಾರ ಎಂದು ಟೀಕಿಸಿದ್ದಾರೆ. ಸೋನು ಎಂಟ್ರಿ ನೋಡಿದ ಬಳಿಕ ನನ್ನ ಸಮಯ ವ್ಯರ್ಥ ಮಾಡಿಕೊಳ್ಳದಿರಲು ಬಯಸಿದ್ದೇನೆ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ತಿಳಿಸಿದ್ದಾರೆ.
ಕೆಲವರಿಂದ ಸೋನುಗೆ ಬೆಂಬಲ
ಒಂದಿಷ್ಟು ಮಂದಿ ಸೋನು ಶ್ರೀನಿವಾಸ್ ಗೌಡ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದರೆ, ಇನ್ನೊಂದಿಷ್ಟು ಮಂದಿ ಸೋನು ಪರ ಬ್ಯಾಟ್ ಬೀಸಿದ್ದಾರೆ. ಸೋನು ವಿವಾದಗಳು ಏನೇ ಇರಬಹುದು. ಆದರೆ, ಬಿಗ್ಬಾಸ್ನಲ್ಲಿ ಒಳ್ಳೆಯ ಮನರಂಜನೆಯನ್ನು ನೀಡುತ್ತಾಳೆ ಎಂಬ ಭರವಸೆ ಇದೆ. ಅವಳಿಗೂ ಒಂದು ವೇದಿಕೆ ಅಥವಾ ಅವಕಾಶ ಕಲ್ಪಿಸಿ ಕೊಡುವುದರಲ್ಲಿ ತಪ್ಪೇನಿಲ್ಲ. ಒಂದು ಮನೆ ಅಂದರೆ ಎಲ್ಲ ರೀತಿಯ ಜನ ಇರಬೇಕು. ಆಗಿದ್ದರೆ ಮಾತ್ರ ಅಲ್ಲಿ ಒಳ್ಳೆಯ ಮನರಂಜನೆ ಜೊತೆಗೆ ನೋಡಗರ ಮನಮುಟ್ಟುವ ಹಾಗೂ ವೀಕ್ಷಕರು ಧಿಕ್ಕರಿಸುವ ವ್ಯಕ್ತಿತ್ವಗಳು ಅನಾವರಣ ಆಗುವುದು. ಸೋನು ಆಯ್ಕೆಯಲ್ಲಿ ಯಾವುದೇ ತಪ್ಪಿಲ್ಲ. ಅವರು ಎಷ್ಟೇ ವಿವಾದ ಮಾಡಿಕೊಂಡಿರಬಹುದು. ಬಿಗ್ಬಾಸ್ ಮನೆಯೊಳಗೆ ಎಲ್ಲರ ಜೊತೆ ಹೇಗಿರುತ್ತಾರೆ ಮತ್ತು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ತಿಳಿಯಬಹುದು ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
ಇನ್ನು, ಸ್ಪರ್ಧಿಗಳನ್ನು ‘ಬಿಗ್ ಬಾಸ್’ ಮನೆಗೆ ಕಳುಹಿಸುವ ಮೊದಲು ಸುದೀಪ್ ತಾವೇ ಗಾಯಕ ಮತ್ತು ನಟ ವಾಸುಕಿ ವೈಭವ್ ಅವರ ಜತೆಗೆ ಮನೆಗೆ ಭೇಟಿ ಕೊಟ್ಟು ಬಂದರು. ಈ ಬಾರಿ ಮನೆಯ ವಿಶೇಷತೆಗಳನ್ನು ಪರಿಚಯ ಮಾಡಿಕೊಟ್ಟರು. ಪುನಃ ವೇದಿಕೆಗೆ ವಾಪಸ್ಸಾಗಿ, ಸ್ಪರ್ಧಿಗಳಿಗೆ ಶಯಭ ಹಾರೈಸಿ ಬೀಳ್ಕೊಟ್ಟರು.