ನಿಮ್ಮ ತುಟಿಯ ಗಾತ್ರವೆಷ್ಟು? ನೆಟ್ಟಿಗನ ವಿಚಿತ್ರ ಪ್ರಶ್ನೆಗೆ ಶ್ರುತಿ ಹಾಸನ್​ ಖಡಕ್​ ಉತ್ತರ ಹೀಗಿತ್ತು...

Shruti
Published on

ಚೆನ್ನೈ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್​ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್​ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್​ಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ.

ಇದೀಗ ಅದೇ ರೀತಿಯ ಕಾಮೆಂಟ್​ಗೆ ಸೌತ್​ ಬ್ಯೂಟಿ ಶ್ರುತಿ ಹಾಸನ್​ ಉತ್ತರ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಶ್ರುತಿ ಹಾಸನ್​ ಆಗಾಗ ಅಭಿಮಾನಿಗಳ ಜತೆ ಸಂವಹನ ನಡೆಸುತ್ತಿರುತ್ತಾರೆ. ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ “ಆಸ್ಕ್​ ಮಿ ಎನಿಥಿಂಗ್​” ಸೆಷನ್ಸ್​ ನಡೆಸಿದ್ದರು. ಯಾವುದೇ ಪ್ರಶ್ನೆಗಳನ್ನು ಮುಕ್ತವಾಗಿ ಕೇಳಲು ನೆಟ್ಟಿಗರಿಗೆ ಶ್ರುತಿ ತಿಳಿಸಿದ್ದರು.

ಈ ವೇಳೆ ನೆಟ್ಟಿಗನೊಬ್ಬ ನಿಮ್ಮ ತುಟಿಯ ಗಾತ್ರವೆಷ್ಟು ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಖಡಕ್​ ಉತ್ತರ ನೀಡಿರುವ ಶ್ರುತಿ, ತುಟಿಗೂ ಗಾತ್ರ ಇರುತ್ತದೆಯೇ? ಎಂದು ಮರು ಪ್ರಶ್ನಿಸಿದ್ದಾರೆ. ಸೂಕ್ಷ್ಮ ಸಂವೇದನೆ ಅರಿಯದೇ ಏನೇನು ಪ್ರಶ್ನೆಗಳನ್ನು ಕೇಳಿ ನಟಿಯರನ್ನು ಮುಜುಗರ ಪಡುವಂತೆ ಮಾಡುವುದೇ ಕೆಲ ಟ್ರೋಲಿಗರ ಚಾಳಿಯಾಗಿದ್ದು, ಇದಕ್ಕೆ ನಟಿಯರು ಕೂಡ ಬೋಲ್ಡ್​ ಆಗಿ ಉತ್ತರ ನೀಡುವ ಮೂಲಕ ಆಗಾಗ ಶ್ರುತಿ ರೀತಿ ಸುದ್ದಿಯಾಗುತ್ತಿರುತ್ತಾರೆ.

ಶ್ರುತಿ ಅವರು ಟ್ರೋಲ್​​ ಆಗುತ್ತಿರುವುದು ಇದೇ ಮೊದಲಲ್ಲ. ಶ್ರುತಿ ಈ ಹಿಂದೆ ನೆಟಿಜನ್‌ಗಳಿಂದ ಬಾಡಿ ಶೇಮಿಂಗ್​ಗೆ ಒಳಗಾಗಿದ್ದಾರೆ. ಈ ಹಿಂದೆ ಫೋಟೋವೊಂದಕ್ಕೆ ಅನೇಕರು “ತುಂಬಾ ತೆಳ್ಳಗಾಗಿದ್ದೀರ”, “ವಯಸ್ಸಾದಂತೆ ಕಾಣುತ್ತಿದ್ದೀರ” ಎಂದು ಕಾಮೆಂಟ್​ಗಳನ್ನು ಮಾಡಿದ್ದರು. ಇಂತಹ ಕಾಮೆಂಟ್​ಗಳು ಬರಲಾರಂಭಿಸಿದ ತಕ್ಷಣ ಮತ್ತೊಂದು ಪೋಸ್ಟ್​ನ್ನು ಹಾಕುವ ಮೂಲಕ ನಟಿ ಎಲ್ಲರ ಬಾಯಿ ಮುಚ್ಚಿಸಿದ್ದರು.

ತಾನು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿರುವ ಸತ್ಯವನ್ನು ಬಾಯ್ಬಿಟ್ಟಿರುವ ನಟಿ, ಇದು ನನ್ನ ಬದುಕು, ನನ್ನ ಮುಖ. ನಾನು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದೇನೆ. ಅದನ್ನು ಹೇಳಿಕೊಳ್ಳಲು ನನಗೇನು ಹೇಸಿಗೆಯಿಲ್ಲ. ಅದನ್ನು ಪ್ರಚಾರ ಮಾಡಬೇಕೆಂದೇನಿಲ್ಲ. ಹಾಗಂತ ಅದರ ವಿರುದ್ಧವೂ ನಾನಿಲ್ಲ. ಇದು ನಾನು ಇರಲು ಬಯಸುವ ರೀತಿ ಎಂದು ಹೇಳಿಕೊಂಡಿದ್ದರು.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾರೆ, ಶ್ರುತಿ ಅವರು ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​ ನಿರ್ದೇಶನದ ಹಾಗೂ ಪ್ರಭಾಸ್​ ಅಭಿನಯದ ಬಹುನಿರೀಕ್ಷಿತ ಸಲಾರ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ಚಿರಂಜೀವಿ ಅವರ 154ನೇ ಸಿನಿಮಾದಲ್ಲೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net