ಬೆದರಿಕೆ ಕರೆ ಬೆನ್ನಲ್ಲೇ ಸಾವಿನ ಸುದ್ದಿಯು ಬಂತು: ನಟಿಯ ತಂದೆಯ ದೂರಿನಲ್ಲಿ ಸ್ಪೋಟಕ ಮಾಹಿತಿ ಬಯಲು

Savi Madappa
Published on

ಬೆಂಗಳೂರು: ನಟಿ ಸವಿ ಮಾದಪ್ಪ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ವಿವೇಕ್ ಹಾಗೂ ಮಹೇಶ್ ವಿರುದ್ಧ ನಟಿಯ ತಂದೆ ಪ್ರಭುಮಾದಪ್ಪ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ನನ್ನ ಮಗಳ ಸಾವಿಗೆ ನಟ ವಿವೇಕ್ ಹಾಗೂ ಮಹೇಶ್ ಕಿರುಕುಳವೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸವಿ ಮಾದಪ್ಪ ತಂದೆ ಪ್ರಭುಮಾದಪ್ಪ ನೀಡಿರುವ ದೂರಿನ ಇಂಚಿಂಚೂ ಮಾಹಿತಿ ದಿಗ್ವಿಜಯ ನ್ಯೂಸ್​ಗೆ ಲಭ್ಯವಾಗಿದೆ.

ನನ್ನ ಮಗಳು ಸವಿಮಾದಪ್ಪ, ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸುವ ಸಲುವಾಗಿ 5 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ನೆಲೆಸಿದ್ದಳು. ಕಳೆದ ಎರಡು ವರ್ಷಗಳಿಂದ ಕುಂಬಳಗೋಡು ಬಳಿಯ ಸನ್ವರ್ಥ್ ಅಪಾರ್ಟ್ಮೆಂಟ್​ನಲ್ಲಿ ವಾಸವಾಗಿದ್ದಳು. ಈ ವೇಳೆ ನನ್ನ ಮಗಳಿಗೆ ವಿವೇಕ್ ಎಂಬುವವನ ಪರಿಚಯವಾಗಿತ್ತು ಎಂದು ಪ್ರಭುಮಾದಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮುಂದುವರಿದು ವಿವೇಕ್ ನನ್ನ ಮಗಳನ್ನ ಪ್ರೀತಿಸುತ್ತೇನೆ, ನಿನ್ನನ್ನೇ ಮದುವೆಯಾಗುತ್ತೇನೆಂದು ಪೀಡಿಸುತ್ತಿದ್ದ. ಈ ವಿಚಾರವನ್ನು ನನ್ನ ಮಗಳು ಸವಿ ಮಾದಪ್ಪ, ನನ್ನ ಪತ್ನಿ ರೇಣುಕಾಳಿಗೆ ತಿಳಿಸಿದ್ದಳು. ನಿನ್ನೆ (ಸೆ.30) ವಿವೇಕ್ ನನ್ನ ಪತ್ನಿ ರೇಣುಕಾಗೆ ಬೆಳಗ್ಗೆ 9ಕ್ಕೆ ಪೊನ್ ಕರೆ ಮಾಡಿದ್ದ. ನಿನ್ನ ಮಗಳು ನನ್ನನ್ನು ಮದುವೆಯಾಗದಿದ್ದರೆ, ಅವಳನ್ನ ಹೊಡೆದು ಸಾಯಿಸುತ್ತೇನೆಂದು ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದಾರೆ.

ಬೆದರಿಕೆ ಹಾಕಿದ ಒಂದು ಗಂಟೆ ನಂತರ ನನ್ನ ದೊಡ್ಡಮಗಳು ಭಾಗ್ಯಶ್ರೀ ಕರೆಮಾಡಿ ಸವಿ ಸತ್ತು ಹೋಗಿದ್ದಾಳೆ ಎಂದು ತಿಳಿಸಿದಳು. ನನ್ನ ಮಗಳ ಸಾವಿಗೆ ವಿವೇಕ್ ಹಾಗೂ ಅವಳ ಸಹಾಯಕನಾಗಿದ್ದ ಮಹೇಶ್ ಕಾರಣ. ನನ್ನ ಮಗಳ ಬಳಿ 6 ಲಕ್ಷ ರೂ. ಹಣವಿತ್ತು. ಎರಡು ದಿನಗಳ ಹಿಂದೆ 1 ಲಕ್ಷ ಹಣವನ್ನು ಆಕೆಗೆ ಕಳುಹಿಸಿದ್ದೆ. ನನ್ನ ಮಗಳ ಜೊತೆಯಲ್ಲಿದ್ದ ಮಹೇಶ್ ಹಾಗೂ ವಿವೇಕ್​ ಕಿರುಕುಳವನ್ನು ತಾಳಲಾರದೇ ನಿನ್ನೆ 10.30ರ ಸುಮಾರಿನಲ್ಲಿ ಸೀಲಿಂಗ್ ಫ್ಯಾನ್​ಗೆ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾಳೆಂದು ಹೇಳಿದ್ದಾರೆ.

ವಿವೇಕ್ ಹಾಗೂ ಮಹೇಶ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಟಿಯ ತಂದೆ ದೂರಿದ್ದಾರೆ. ದೂರಿನನ್ವಯ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ IPC 306 ಅಡಿಯಲ್ಲಿ ಕೇಸ್ ರಿಜಿಸ್ಟರ್ ಆಗಿದೆ. ಆತ್ಮಹತ್ಯೆಗೆ ಕುಮ್ಮಕ್ಕು-ಪ್ರಚೋದನೆ ಅಂತ ದೂರು ದಾಖಲಿಸಲಾಗಿದೆ. ದೂರಿನನ್ವಯ ವಿವೇಕ್ A1 ಆರೋಪಿ ಹಾಗೂ ಮಹೇಶ್ A2 ಆರೋಪಿ ಆಗಿದ್ದಾರೆ. ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net