ಕುತೂಹಲ ಮೂಡಿಸಿದ ನಟಿ ರಮ್ಯಾ ಟ್ವೀಟ್​: ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಲು ಮುಹೂರ್ತ ಫಿಕ್ಸ್​

ramya
Published on

ಬೆಂಗಳೂರು: 2003ರಲ್ಲಿ ತೆರೆಕಂಡ ಅಭಿ ಸಿನಿಮಾದಲ್ಲಿ ದಿವಂಗತ ನಟ ಪುನೀತ್ ಎದುರು ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ದಿವ್ಯ ಸ್ಪಂದನಾ ಅಲಿಯಾಸ್​ ರಮ್ಯಾ, ಕನ್ನಡ ಮಾತ್ರವಲ್ಲದೇ ಕೆಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ನಂತರ ಕಾಂಗ್ರೆಸ್‌ನಿಂದ ರಾಜಕೀಯಕ್ಕೆ ಪ್ರವೇಶಿಸಿ ಸಂಸದೆಯೂ ಆದರು. ಆದರೆ ರಾಜಕೀಯದಲ್ಲಿ ವಿಫಲರಾಗಿ ಸಂಸದೆ ಪಟ್ಟವೂ ಹೋಗಿ ಕೊನೆಗೆ ಸಿನಿಮಾ, ರಾಜಕೀಯ ಎಲ್ಲದ್ದರಿಂದಲೂ ದೂರ ಆಗಿರುವ ರಮ್ಯಾ, ಕಳೆದ ಕೆಲವು ತಿಂಗಳುಗಳಿಂದ ಸಿನಿಮಾ ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ.

ತಾಜಾ ವಿಚಾರವೇನೆಂದರೆ, ಇಂದು ಟ್ವೀಟ್​ ಮಾಡಿರುವ ರಮ್ಯಾ, ಅಭಿಮಾನಿಗಳ ವಲಯದಲ್ಲಿ ಒಂದು ಕುತೂಹಲವನ್ನು ಹುಟ್ಟು ಹಾಕಿದ್ದಾರೆ. ಗಣೇಶ ಹಬ್ಬದಂದು ಅಂದರೆ ಆ.31ರ ಬೆಳಗ್ಗೆ ಸಿಹಿ ಸುದ್ದಿಯೊಂದನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ತಮ್ಮ ಟ್ವಿಟರ್​ನಲ್ಲಿ ಫೋಟೋ ಒಂದನ್ನು ಶೇರ್​ ಮಾಡಿಕೊಂಡಿರುವ ರಮ್ಯಾ, ನಾಳೆ ಬೆಳಗ್ಗೆ 11:ರ ಸುಮಾರಿಗೆ ನಾನು ಕೆಲವು ಸಿಹಿ ಸುದ್ದಿಯನ್ನು ಶೇರ್​ ಮಾಡುತ್ತೇನೆ. ಇದು ಅಧಿಕೃತ ಎಂದು ಹೇಳಿದ್ದಾರೆ.

ಏನಿರಬಹುದು ಸಿಹಿ ಸುದ್ದಿ?

ರಮ್ಯಾ ಅವರು ರಾಜಕೀಯದಿಂದ ಸದ್ಯ ದೂರ ಉಳಿದಿದ್ದಾರೆ. ಆದರೆ, ಕೆಲವು ತಿಂಗಳುಗಳಿಂದ ಸಿನಿಮಾ ಸಂಪರ್ಕದಲ್ಲಿದ್ದಾರೆ. ಇತ್ತೀಚೆಗೆ ಡಾಲಿ ಧನಂಜಯ್​ ಅಭಿನಯದ ಹೊಯ್ಸಳ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ರಮ್ಯಾ ಅವರು ಕಾಣಿಸಿಕೊಂಡಿದ್ದರು. ಅಲ್ಲದೆ, ಸಿನಿಮಾ ಕಾರ್ಯಕ್ರಮಗಳಲ್ಲಿಯು ಭಾಗಿಯಾಗಿದ್ದರು. ಇಷ್ಟೇ ಅಲ್ಲದೆ, ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳಿಗೆ ರಮ್ಯಾ ತಪ್ಪದೇ ಶುಭ ಕೋರುತ್ತಾ ಬರುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದರೆ, ನಾಳೆ ರಮ್ಯಾ ಅವರು ತಮ್ಮ ಹೊಸ ಚಿತ್ರದ ಬಗ್ಗೆ ಏನಾದರೂ ಅಪ್​ಡೇಟ್​ ಕೊಡಬಹುದು ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ.

ಫ್ಯಾನ್ಸ್​ ಖುಷಿಗೆ ಪಾರವೇ ಇರುವುದಿಲ್ಲ

ಒಂದು ವೇಳೆ ರಮ್ಯಾ ಅವರು ಮತ್ತೆ ಬಣ್ಣ ಹಚ್ಚಿದರೆ ಫ್ಯಾನ್ಸ್​ ಖುಷಿಗೆ ಪಾರವೇ ಇರುವುದಿಲ್ಲ. ರಮ್ಯಾ ಅವರಿಗೆ ವಿಶೇಷ ಅಭಿಮಾನಿಗಳ ಬಳಗವೇ ಇದೆ. ಅವರ ಅಭಿನಯ ಹಾಗೂ ಸೌಂದರ್ಯಕ್ಕೆ ಮರುಳಾದವರು ಇದ್ದಾರೆ. ಸಾಕಷ್ಟು ವಿವಾದಗಳನ್ನು ಮಾಡಿಕೊಂಡಿದ್ದರು. ಅವರನ್ನು ತುಂಬಾ ಇಷ್ಟಪಡುವ ಮತ್ತೂ ಈಗಲೂ ಆರಾಧಿಸುವ ಅಭಿಮಾನಿಗಳಿದ್ದಾರೆ. ಹೀಗಾಗಿ ರಮ್ಯಾ ಅವರು ಮತ್ತೆ ಸಿನಿಮಾ ಎಂಟ್ರಿ ನೀಡಿದರೆ, ಅವರಿಗಿಂತ ಖುಷಿ ಪಡುವವರು ಯಾರು ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net