ನನ್ನ ಹಾಸಿಗೆ ನಾನೇ ಮಾಡ್ಕೋಬೇಕು, ಮಧ್ಯಾಹ್ನದವರೆಗೂ ಅದರ ಮೇಲೆಯೇ ಬಿದ್ದಿರಬಾರದು ಅಂದ್ರು ಸಮಂತಾ

Samantha
Published on

ಹೈದರಾಬಾದ್​: ತಾರಾದಂಪತಿ ಸಮಂತಾ-ನಾಗಚೈತನ್ಯ 4 ವರ್ಷಗಳ ವೈವಾಹಿಕ ಜೀವನಕ್ಕೆ ವಿದಾಯ ಹೇಳಿರುವುದು ಅಭಿಮಾನಿಗಳಿಗೆ ಬಹಳ ಬೇಸರ ತರಿಸಿದೆ. ಇನ್ನೊಂದೆಡೆ ಡಿವೋರ್ಸ್​ ವಿಚಾರವಾಗಿ ಪರ-ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದ್ದು, ತಮ್ಮ ವಿರುದ್ಧ ಮಾತನಾಡುತ್ತಿರುವವರಿಗೆ ಸಮಂತಾ ಖಡಕ್​ ಸಂದೇಶವೊಂದನ್ನು ರವಾನಿಸಿದ್ದಾರೆ.

ಒಂದು ವೇಳೆ ನಾನು ಪ್ರಪಂಚವನ್ನೇ ಬದಲಾಯಿಸಲು ಬಯಸಿದರೆ, ಮೊದಲು ನಾವು ಬದಲಾಗಬೇಕು. ನನ್ನ ಹಾಸಿಗೆಯನ್ನು ನಾನೇ ಮಾಡಿಕೊಳ್ಳಬೇಕು. ಹಾಗಂತಾ ಮಧ್ಯಾಹ್ನದವರೆಗೂ ಹಾಸಿಗೆ ಮೇಲೆಯೇ ಬಿದ್ದಿರಬಾರದು. ಕಪಾಟಿನಲ್ಲಿರುವ ಧೂಳನ್ನು ನಾನೇ ತೆಗೆಯಬೇಕು. ನಾನು ಮಾಡಲು ಬಯಸುವ ಕೆಲಸಗಳ ಬಗ್ಗೆ ತುಂಬಾ ಕನಸು ಕಾಣುತ್ತಿದ್ದೇನೆ ಎನ್ನುವ ಮೂಲಕ ಊಹಾಪೋಹಗಳಿಗೆ, ಆರೋಪಗಳಿಗೆ ನಾನು ಕಿವಿ ಕೊಡುವುದಿಲ್ಲ ಎಂದು ಸಮಂತಾ ಸಂದೇಶ ರವಾನಿಸಿದ್ದಾರೆ. ಅಲ್ಲದೆ, ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು ಮತ್ತು ಸೋಮಾರಿಗಳಾಗಬಾರದೆಂದು ಹೇಳಿಕೊಂಡಿದ್ದಾರೆ.

ನಿನ್ನೆ (ಅ.2) ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ತಂತಮ್ಮ ಇನ್​ಸ್ಟಾಗ್ರಾಂ ಖಾತೆಗಳಲ್ಲಿ ಒಂದೇ ರೀತಿಯ ಸಂದೇಶಗಳನ್ನು ಪೋಸ್ಟ್​ ಮಾಡಿದ್ದಾರೆ. “ಸಾಕಷ್ಟು ಸಮಾಲೋಚನೆಯ ಬಳಿಕವು ನಾವಿಬ್ಬರೂ ಗಂಡ-ಹೆಂಡತಿಯ ಸಂಬಂಧ ಬಿಟ್ಟು ಬೇರೆ ಬೇರೆಯಾಗುವ ನಿರ್ಧಾರ ತೆಗೆದುಕೊಂಡಿದ್ದೇವೆ. ಒಂದು ದಶಕದ ಮಟ್ಟಿಗಿನ ಆಪ್ತಸ್ನೇಹವನ್ನು ನಾವು ಹೊಂದಿದ್ದೆವು. ಬಹುಶಃ ಅದೇ ನಮ್ಮಿಬ್ಬರ ಸಂಬಂಧದ ಸತ್ವವಾಗಿತ್ತು. ಇದರಿಂದಲೇ ಮುಂದೆಯೂ ನಮ್ಮಿಬ್ಬರ ನಡುವೆ ವಿಶೇಷ ನಂಟು ಮುಂದುವರಿಯುತ್ತದೆ ಎಂದು ನಂಬಿದ್ದೇವೆ” ಎಂದು ಸಮಂತಾ ಮತ್ತು ನಾಗಚೈತನ್ಯ ಬರೆದಿದ್ದಾರೆ. ಜೊತೆಗೆ, ತಮ್ಮ ಈ ಕಷ್ಟಕಾಲದಲ್ಲಿ ತಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮದವರು ತಮಗೆ ಬೆಂಬಲ ನೀಡಬೇಕು. ತಾವು ಮೂವ್​ ಆನ್​ ಆಗಲು ಅಗತ್ಯವಾದ ಪ್ರೈವೆಸಿ ಕೊಡಬೇಕು ಎಂದೂ ಮನವಿ ಮಾಡಿದ್ದಾರೆ.

ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್​ ಸುದ್ದಿ ಕೇಳಿ ಅಭಿಮಾನಿಗಳಿಗೆ ಶಾಕ್​ ಆಗಿದೆ. ಅನೇಕರು ನೀವಿಬ್ಬರು ದೂರಾಗಬಾರದಿತ್ತು, ಮತ್ತೆ ಒಂದಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ವಿಘ್ನೇಶ್ ಶಿವನ್ ನಿರ್ದೇಶನದ ಮತ್ತು ವಿಘ್ನೇಶ್ ಶಿವನ್ ರೌಡಿ ಪಿಕ್ಚರ್ಸ್ ಸಹಯೋಗದೊಂದಿಗೆ ಸೆವೆನ್ ಸ್ಕ್ರೀನ್ ಸ್ಟುಡಿಯೋದಿಂದ ಬಂಡವಾಳ ಹೂಡುತ್ತಿರುವ ತಮಿಳು ಸಿನಿಮಾ ಕಾತು ವಾಕುಲಾ ರಂಡು ಕಾದಲ್​ ನಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಜೊತೆ ಸಮಂತಾ ನಟಿಸುತ್ತಿದ್ದಾರೆ. ಇದರೊಂದಿಗೆ ಗುಣಶೇಖರ್ ನಿರ್ದೇಶನದ ಶಾಕುಂತಲಂ ಸಿನಿಮಾದಲ್ಲಿ ಶಾಕುಂತಲೆಯಾಗಿ ಸಮಂತಾ ಬಣ್ಣ ಹಚ್ಚಿದ್ದು, ಶಾಕುಂತಲಂ ಚಿತ್ರದ ಚಿತ್ರೀಕರಣವನ್ನು ಸಮಂತಾ ಸಂಪೂರ್ಣ ಮುಗಿಸಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net