

ಹೈದರಾಬಾದ್: ಚಿತ್ರರಂಗದಲ್ಲಿ ಈಗ ಸಮಂತಾ-ನಾಗಚೈತನ್ಯ ಡಿವೋರ್ಸ್ ವಿಚಾರವೇ ಹೆಚ್ಚು ಸದ್ದು ಮಾಡುತ್ತಿದೆ. ಇದುವರೆಗೂ ಸುಮ್ಮನಿದ್ದ ನಾಗಸಮಂತಾ ನಿನ್ನೆ ಅಧಿಕೃತವಾಗಿ ಡಿವೋರ್ಸ್ ಘೋಷಣೆ ಮಾಡುವ ಮೂಲಕ ವೈವಾಹಿಕ ಜೀವನಕ್ಕೆ ಅರ್ಧದಲ್ಲೇ ವಿದಾಯ ಹೇಳಿರುವುದು ಅಭಿಮಾನಿಗಳಿಗೆ ಬಹಳ ಬೇಸರ ತರಿಸಿದೆ.
ಇದೆಲ್ಲದರ ನಡುವೆ ಇಬ್ಬರ ಡಿವೋರ್ಸ್ ವಿಚಾರವಾಗಿ ಅನೇಕ ಊಹಾಪೋಹಗಳು ಚರ್ಚೆಯಾಗುತ್ತಿರುವ ನಡುವೆಯೇ ಸಮಂತಾ ಮಾಡಿರುವ ಟ್ವೀಟ್ ಭಾರಿ ಕುತೂಹಲದ ಜತೆ ಚರ್ಚೆಯನ್ನು ಹುಟ್ಟು ಹಾಕಿದೆ. ಇತಿಹಾಸದ ಸಂದೇಶವನ್ನು ಮರು ನೆನಪಿಸಿ ಸಮಂತಾ ಪದಗಳ ಮೂಲಕವೇ ಟಾಂಗ್ ನೀಡಿದ್ದು, ಆ ಟಾಂಗ್ ಯಾರಿಗೆ ಇರಬಹುದು ಎಂಬ ಚರ್ಚೆ ಶುರುವಾಗಿದೆ.
ನಾನು ಹತಾಶಾಳಾದಗ ಸತ್ಯ ಮತ್ತು ಪ್ರೀತಿ ಯಾವಾಗಲು ಗೆಲ್ಲುತ್ತದೆ ಎಂಬ ಇತಿಹಾಸವನ್ನು ನೆನಪು ಮಾಡಿಕೊಳ್ಳುತ್ತೇನೆ. ನಿರಂಕುಶಾಧಿಕಾರಿಗಳು ಮತ್ತು ಕೊಲೆಗಾರರು ಇದ್ದರು, ಸ್ವಲ್ಪ ಸಮಯದವರೆಗೆ ಅವರೇ ಅಜೇಯರೆಂದು ಕಾಣುತ್ತಾರೆ. ಆದರೆ, ಕೊನೆಯಲ್ಲಿ ಅವರ ಬೀಳಲೇಬೇಕು. ಯಾವಾಗಲೂ ಇದನ್ನು ಯೋಚಿಸಿ ಎಂದು ಸಮಂತಾ ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಸಮಂತಾ ಯಾರಿಗೆ ಎಚ್ಚರಿಕೆ ನೀಡಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ತಮ್ಮ ವಿರುದ್ಧ ಮಾತನಾಡುತ್ತಿರುವವರ ಬಾಯಿಗೆ ಬೀಗ ಜಡಿಯಲು ಈ ಟ್ವೀಟ್ ಮಾಡಿರಬಹುದು ಎನ್ನಲಾಗುತ್ತದೆ.
ನಿನ್ನೆ (ಅ.2) ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ತಂತಮ್ಮ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಒಂದೇ ರೀತಿಯ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. "ಸಾಕಷ್ಟು ಸಮಾಲೋಚನೆಯ ಬಳಿಕವು ನಾವಿಬ್ಬರೂ ಗಂಡ-ಹೆಂಡತಿಯ ಸಂಬಂಧ ಬಿಟ್ಟು ಬೇರೆ ಬೇರೆಯಾಗುವ ನಿರ್ಧಾರ ತೆಗೆದುಕೊಂಡಿದ್ದೇವೆ. ಒಂದು ದಶಕದ ಮಟ್ಟಿಗಿನ ಆಪ್ತಸ್ನೇಹವನ್ನು ನಾವು ಹೊಂದಿದ್ದೆವು. ಬಹುಶಃ ಅದೇ ನಮ್ಮಿಬ್ಬರ ಸಂಬಂಧದ ಸತ್ವವಾಗಿತ್ತು. ಇದರಿಂದಲೇ ಮುಂದೆಯೂ ನಮ್ಮಿಬ್ಬರ ನಡುವೆ ವಿಶೇಷ ನಂಟು ಮುಂದುವರಿಯುತ್ತದೆ ಎಂದು ನಂಬಿದ್ದೇವೆ” ಎಂದು ಸಮಂತಾ ಮತ್ತು ನಾಗಚೈತನ್ಯ ಬರೆದಿದ್ದಾರೆ. ಜೊತೆಗೆ, ತಮ್ಮ ಈ ಕಷ್ಟಕಾಲದಲ್ಲಿ ತಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮದವರು ತಮಗೆ ಬೆಂಬಲ ನೀಡಬೇಕು. ತಾವು ಮೂವ್ ಆನ್ ಆಗಲು ಅಗತ್ಯವಾದ ಪ್ರೈವೆಸಿ ಕೊಡಬೇಕು ಎಂದೂ ಮನವಿ ಮಾಡಿದ್ದಾರೆ.
ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್ ಸುದ್ದಿ ಕೇಳಿ ಅಭಿಮಾನಿಗಳಿಗೆ ಶಾಕ್ ಆಗಿದೆ. ಅನೇಕರು ನೀವಿಬ್ಬರು ದೂರಾಗಬಾರದಿತ್ತು, ಮತ್ತೆ ಒಂದಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)