

ಹೈದರಾಬಾದ್: ನಟ ನಾಗಚೈತನ್ಯ ಜತೆ ಡಿವೋರ್ಸ್ ಆದ ಬಳಿಕ ಸಂಪೂರ್ಣ ವೃತ್ತಿ ಜೀವನದತ್ತ ಗಮನ ಹರಿಸಿರುವ ನಟಿ ಸಮಂತಾ ತಮ್ಮನ್ನು ಹರಸಿ ಬರುತ್ತಿರುವ ಯಾವ ಪಾತ್ರವನ್ನು ಬಿಡದೇ ಎಲ್ಲವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಸ್ಯಾಮ್ ಬಿಜಿಯಾಗಿದ್ದಾರೆ.
ಈಗಾಗಲೇ ನಟ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದಲ್ಲಿ ಐಟಂ ಸಾಂಗ್ನಲ್ಲಿ ಮೊದಲ ಬಾರಿಗೆ ಸೊಂಟ ಬಳಕಿಸುವ ಮೂಲಕ ಸಮಂತಾ ಎಲ್ಲರ ಹುಬ್ಬೇರಿಸಿದ್ದಾರೆ. ಕೇವಲ ಒಂದೇ ಕಡೆ ಸೀಮಿತವಾಗದೇ ಟಾಲಿವುಡ್, ಬಾಲಿವುಡ್ ಮತ್ತು ಹಾಲಿವುಡ್ನಲ್ಲಿ ತಮ್ಮ ಛಾಪು ಮೂಡಿಸಲು ಸಮಂತಾ ಸಜ್ಜಾಗುತ್ತಿದ್ದಾರೆ.
ಈಗಾಗಲೇ ಇಂಗ್ಲಿಸ್ ಬುಕ್ ಆಧಾರಿತ ಅರೆಂಜ್ಮೆಂಟ್ಸ್ ಆಫ್ ಲವ್ ಎಂಬ ಚೊಚ್ಚಲ ಹಾಲಿವುಡ್ ಚಿತ್ರದಲ್ಲಿ ನಟಿ ಸಮಂತಾ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಸಮಂತಾ ಅವರು ಬೈಸೆಕ್ಸುವಲ್ (ಗಂಡು-ಹೆಣ್ಣು ಇಬ್ಬರ ಜತೆ ಲೈಂಗಿಕ ಸಂಬಂಧ ಬೆಳೆಸುವುದು) ಪಾತ್ರದಲ್ಲಿ ನಟಿಸಲಿದ್ದಾರೆ. ಇದೇ ಮೊದಲ ಬಾರಿಗೆ ಈ ರೀತಿಯ ಪಾತ್ರದಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದು, ತಮ್ಮ ಅಭಿನಯದ ಮೂಲಕ ಹಾಲಿವುಡ್ನಲ್ಲಿ ಕಿಚ್ಚು ಹಚ್ಚಲು ಸಮಂತಾ ರೆಡಿಯಾಗಿದ್ದಾರೆ.
ಇದೀಗ ತಾಜಾ ಸುದ್ದಿಯೆಂದರೆ ಸಮಂತಾ ಇದೇ ಮೊದಲ ಬಾರಿಗೆ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಪ್ಯಾನ್ ಇಂಡಿಯಾ ಸಿನಿಮಾ ಯಶೋಧಾದಲ್ಲಿ ಸಮಂತಾ ಬಿಜಿಯಾಗಿದ್ದಾರೆ. ಈ ಚಿತ್ರದಲ್ಲಿ ಸಮಂತಾ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿದೆ. ಈ ಚಿತ್ರವನ್ನು ಹರೀಶ್ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ.
ದಾದಿಯರಾದ ಗರ್ಭಿಣಿಯರು ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸಿದಾಗ ಅದರಿಂದ ಯಾವ ರೀತಿ ಹೊರಬರುತ್ತಾರೆ ಎಂಬುದು ಚಿತ್ರದ ತಿರುಳು ಎಂದು ಹೇಳಲಾಗಿದೆ. ಸದ್ಯ ವಿಭಿನ್ನ ಚಿತ್ರಗಳ ಮೂಲಕ ಸಮಂತಾ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದು, ವೃತ್ತಿಜೀವನ ಉತ್ತಂಗಕ್ಕೇರಲು ತಯಾರಿ ನಡೆಸುತ್ತಿದ್ದಾರೆಂದು ಹೇಳಲಾಗಿದೆ. (ಏಜೆನ್ಸೀಸ್)