ಹೀಗೆ ಸುಮ್ಮನಿದ್ದರೆ ಪ್ಯಾನ್​ ಇಂಡಿಯಾ ಕ್ರೇಜ್​ ಕಣ್ಮರೆಯಾಗಲಿದೆ... ಯಶ್​ ತಕ್ಷಣ ಈ ಕೆಲ್ಸ ಮಾಡಲೇಬೇಕಿದೆ!

Yash
Published on

ಬೆಂಗಳೂರು: ಕೆಜಿಎಫ್​ ಚಾಪ್ಟರ್​ 1 ಮತ್ತು 2ರ ಅದ್ಭುತ ಯಶಸ್ಸಿನ ಬಳಿಕ ರಾಕಿಂಗ್​ ಸ್ಟಾರ್​ ಯಶ್​ ಅವರು ಪ್ರಭಾಸ್​ ಮಾದರಿಯಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ. ಆದಾಗ್ಯೂ, ಇವರಿಬ್ಬರ ನಡುವೆ ಇರುವ ಒಂದು ವ್ಯತ್ಯಾಸವೆಂದರೆ, ಬಾಹುಬಲಿ ಬಳಿ ಯಶಸ್ಸಿನ ಬಳಿಕ ಪ್ರಭಾಸ್ ಅವರು ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡರು. ಆದರೆ, ಯಶ್ ಮಾತ್ರ ತುಂಬಾ ಚೂಸಿಯಾಗಿದ್ದು, ಸಿನಿಮಾ ಆಯ್ಕೆಗಳಲ್ಲಿ ಹಿಂಜರಿಯುತ್ತಿದ್ದಾರೆ.

ದಿಲ್​ ರಾಜು ಮತ್ತು ಮೈತ್ರಿ ಮೂವೀ ಮೇಕರ್ಸ್​ನಂತಹ ದೊಡ್ಡ ತೆಲುಗು ನಿರ್ಮಾಪಕರು ಕಾಲ್​ಶೀಟ್​ ಕೇಳಿದ್ದರೂ ಯಶ್​ ಮಾತ್ರ ಯಾರೊಬ್ಬರಿಗೂ ಹಸಿರು ನಿಶಾನೆಯನ್ನು ತೋರಿಲ್ಲ. ಅಚ್ಚರಿಯೆಂದರೆ, ಕೆಜಿಎಫ್​-2 ಬಳಿಕ ಯಶ್​ ತಮ್ಮ ಮುಂದಿನ ಹೊಸ ಚಿತ್ರವನ್ನು ಇನ್ನು ಘೋಷಣೆಯೇ ಮಾಡಿಲ್ಲ. ಯಾವಾಗ ಹೊಡ ಸಿನಿಮಾ ಘೋಷಣೆ ಮಾಡುತ್ತಾರೆ ಅಂತಾ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

ಬಾಹುಬಲಿ ಬಳಿಕ ಪ್ರಭಾಸ್​ ಸಾಹೋ, ರಾಧೆಶ್ಯಾಮ್​, ಸಲಾರ್​, ಆದಿಪುರುಷ, ಪ್ರಾಜೆಕ್ಟ್​ ಕೆ ಮತ್ತು ಸ್ಪಿರಿಟ್​ನಂತಹ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ಯಶ್​ ಏನು ಮಾಡುತ್ತಿದ್ದಾರೆ ಎಂಬುದೇ ಈಗ ಅಚ್ಚರಿಗೆ ಕಾರಣವಾಗಿದೆ. ಎರಡು ದಿನಗಳ ಹಿಂದಷ್ಟೇ ಯಶ್​ 19 ಎಂಬ ಹ್ಯಾಷ್​ಟ್ಯಾಗ್​ ಟ್ರೆಂಡ್​ ಆಗಿತ್ತು. ಈ ಮೂಲಕ ಹೊಸ ಸಿನಿಮಾವನ್ನು ಘೋಷಣೆ ಮಾಡುವಂತೆ ಯಶ್​ ಅವರನ್ನು ಅಭಿಮಾನಿಗಳು ಒತ್ತಾಯಿಸಿದ್ದರು. ಆದರೆ, ಯಶ್​ ಮಾತ್ರ ಒಂದೇ ಒಂದು ಸುಳಿವು ನೀಡದೇ ಸುಮ್ಮನಾಗಿರುವುದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ.

ಮೂಲಗಳ ಪ್ರಕಾರ ಯಶ್​, ಸ್ಯಾಂಡಲ್​ವುಡ್​ನ ಇಬ್ಬರು ಹೊಸ ನಿರ್ದೇಶಕರಿಗೆ ಓಕೆ ಎಂದಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಬಿಗ್​​ ಬಾಲಿವುಡ್​ ಪ್ರಾಜೆಕ್ಟ್​ ಒಂದರಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ತಮ್ಮ ಮುಂದಿನ ಪ್ರಾಜೆಕ್ಟ್​ ಅನ್ನು ಯಶ್​ ಘೋಷಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಳ್ಳೆಯ ಪ್ರಾಜೆಕ್ಟ್​ ಸಿಗಲಿ ಎಂದು ವರ್ಷಗಳ ಕಾಲ ಹುಡುಕುತ್ತಾ ಕೂತರೆ ಸಾಲದು, ಈಗ ಅನುಭವಿಸುತ್ತಿರುವ ಪ್ಯಾನ್​ ಇಂಡಿಯಾ ಕ್ರೇಜ್​ ಉಳಿಸಿಕೊಳ್ಳಬೇಕಾದರೆ, ಒಂದರ ಹಿಂದಂತೆ ಒಂದು ಸಿನಿಮಾಗಳನ್ನು ಘೋಷಣೆ ಮಾಡುವುದು ಒಳಿತು ಎಂಬುದು ಸಿನಿಮಾ ಪಂಡಿತರ ಅಭಿಪ್ರಾಯವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net