

ಚೆನ್ನೈ: ಏಳು ವರ್ಷಗಳ ಡೇಟಿಂಗ್ ನಂತರ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮಿಬ್ಬರ ಸಂಬಂಧಕ್ಕೆ ವಿವಾಹದ ಮೂಲಕ ಅಧಿಕೃತ ಮುದ್ರೆ ಒತ್ತಿದ್ದಾರೆ. ಜೂನ್ 9ರಂದು ಮಹಾಬಲಿಪುರಂನ ಖಾಸಗಿ ರೆಸಾರ್ಟ್ ಒಂದರಲ್ಲಿ ಇಬ್ಬರು ಕುಟುಂಬದ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದಾರೆ.
ಮದುವೆಯಾದ ಬಳಿಕ ತಾರಾದಂಪತಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಮದುವೆಯಾದ ಮರು ದಿನವೆ ತಿರುಪತಿಗೆ ಭೇಟಿ ನೀಡಿದ್ದ ದಂಪತಿ, ಇದೀಗ ಕೇರಳದಲ್ಲಿ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ.
ಅಂದಹಾಗೆ ನಯನತಾರಾ ಅವರು ದೇಶದ ಸಿನಿ ರಂಗದಲ್ಲೇ ಪ್ರಖ್ಯಾತ ನಟಿಯಲ್ಲಿ ಒಬ್ಬರು. ಲೇಡಿ ಸೂಪರ್ ಸ್ಟಾರ್ ಎಂದೇ ಪ್ರಸಿದ್ಧರಾಗಿದ್ದಾರೆ. ದಕ್ಷಿಣ ಭಾರತ ಸಿನಿ ರಂಗದಲ್ಲಿ ಸುಮಾರು 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಹೆಚ್ಚು ಸಭಾವನೆ ಪಡೆಯುವ ನಟಿಯರಲ್ಲಿ ನಯನಾ ಅವರು ಮುಂಚೂಣಿಯಲ್ಲಿದ್ದಾರೆ. ಶಾರುಖ್ ಖಾನ್ ಅಭಿನಯದ ಮತ್ತು ಅಟ್ಲೀ ನಿರ್ದೇಶನದ ಜವಾನ್ ಸಿನಿಮಾ ಮೂಲಕ ಬಾಲಿವುಡ್ಗೂ ಪದಾರ್ಪಣೆ ಮಾಡಿದ್ದಾರೆ.
ಇದೀಗ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನಯನಾ ತಮ್ಮ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡುವಂತಹ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಮುಂಬರುವ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸದಿರಲು ಮತ್ತು ಅರೆಬೆತ್ತಲೆ ದೃಶ್ಯಗಳಲ್ಲಿ ಕಾಣಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಸಂದೇಶವನ್ನು ತಮ್ಮ ನಿರ್ಮಾಪಕರುಗಳಿಗೂ ರವಾನಿಸಿದ್ದಾರೆ.
ಇಂಟಿಮೇಟ್ ದೃಶ್ಯಗಳಿಗೆ ಬ್ರೇಕ್ ಹಾಕಿ, ಇನ್ನು ಮುಂದೆ ವಿಷಯಾಧಾರಿತ ಅಥವಾ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಲು ನಯನಾ ನಿರ್ಧಾರ ಮಾಡಿದ್ದಾರೆ. ನಯನಾರನ್ನು ಬೋಲ್ಡ್ ಪಾತ್ರಗಳಲ್ಲಿ ನೋಡಲು ಬಯಸುವ ಅಭಿಮಾನಿಗಳಿಗೆ ಇನ್ನು ಮುಂದೆ ನಿರಾಸೆ ಆಗಲಿದೆ. ಕೌಟುಂಬಿಕ ಪಾತ್ರಗಳಿಗೆ ಮಾತ್ರ ನಯನಾ ಒತ್ತುಕೊಡಲಿದ್ದಾರಂತೆ.
ಇಷ್ಟೇ ಅಲ್ಲದೆ, ಸಾಲು ಸಾಲು ಸಿನಿಮಾಗಳನ್ನು ನಯನಾ ಒಪ್ಪಿಕೊಳ್ಳುವುದಿಲ್ಲ. ಕುಟುಂಬದ ಕಡೆ ಗಮನ ಹರಿಸಲು ನಿರ್ಧರಿಸಿರುವ ನಯನಾ, ಬಿಡುವಿನ ಸಮಯದಲ್ಲಿ ಮಾತ್ರ ಶೂಟಿಂಗ್ನಲ್ಲಿ ಬಿಜಿಯಾಗಲಿದ್ದಾರೆ. ನಿರ್ಮಾಪಕರಿಗೆ ಈ ಬಗ್ಗೆ ಮೊದಲೇ ಷರತ್ತನ್ನು ತಿಳಿಸಿದ್ದಾರೆ.
ಸದ್ಯ ನಯನಾ ಅವರು ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)