

ಬೆಂಗಳೂರು: ನಟ ಕಿಚ್ಚ ಸುದೀಪ್ ಆತ್ಮೀಯ ಹಾಗೂ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ನಿರ್ಮಾಪಕ ಜಾಕ್ ಮಂಜು ಬನ್ನೇರುಘಟ್ಟ ಬಳಿಯಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎರಡು ದಿನದ ಹಿಂದೆ ಜಾಕ್ ಮಂಜು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಯಕ್ರಮಕ್ಕೆ ಹೋಗಿದ್ದಾಗ ಎಡವಿ ಬಿದ್ದು ಕಾಲು ಮುರಿದುಕೊಂಡಿದ್ದರು. ಕಳೆದ 20 ದಿನದ ಹಿಂದೆ ಈ ಘಟನೆ ನಡೆದಿತ್ತು. ಕೊನೆಗೆ ಕಾಲಿಗೆ ಚಿಕಿತ್ಸೆಯನ್ನು ಪಡೆದಿದ್ದರು. ಆದರೆ, ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿ ಊತ ಬಂದಿತ್ತು. ಹೀಗಾಗಿ ಎರಡು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸದ್ಯ ಜಾಕ್ ಮಂಜು ಅವರು ಆಪರೇಷನ್ ಮಾಡಿಸಿಕೊಂಡಿದ್ದು, ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಶೀಘ್ರ ಚೇತರಿಕೆಗೆ ಅಭಿಮಾನಿಗಳು ಮತ್ತು ಬಂಧು-ಬಳಗದವರು ಹಾರೈಸುತ್ತಿದ್ದಾರೆ.
ಜಾಕ್ ಮಂಜು ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಜುಲೈ 28ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಅಭಿನಯ ಚಕ್ರವರ್ತಿ ಕಿಚ್ಚು ಸುದೀಪ್, ನಿರೂಪ್ ಭಂಡಾರಿ, ನೀತಾ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಬಿಗ್ ಬಜೆಟ್ ಚಿತ್ರವಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ರಾರಾ ರಕ್ಕಮ್ಮ ಹಾಡು ಎಲ್ಲರ ಹುಚ್ಚಿಡಿಸಿದೆ. (ದಿಗ್ವಿಜಯ ನ್ಯೂಸ್)