ಮದ್ವೆಯಾಗಿದ್ರೂ ಪರವಾಗಿಲ್ಲ ತೆಲುಗು ಸ್ಟಾರ್​ ನಟ ಒಪ್ಪಿದ್ರೆ ಈಗಲೂ ಡೇಟಿಂಗ್​ಗೆ ರೆಡಿ ಅಂದ್ರು ವಿಶ್ವ ಸುಂದರಿ!

1284280
Published on

ಹೈದರಾಬಾದ್​: ಮಾಡೆಲಿಂಗ್ ಕ್ಷೇತ್ರದಲ್ಲಿ ಮಾನುಷಿ ಚಿಲ್ಲರ್ ಹೆಸರು ಚಿರಪರಿಚಿತ. 2017ರಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರುತ್ತಿದ್ದಂತೆ, ರಾಷ್ಟ್ರದ ಗಮನ ಸೆಳೆದಿದ್ದರು ಈ ಹರಿಯಾಣ ತರುಣಿ. ಆದರೆ, ವಿಶ್ವ ಸುಂದರಿ ಪಟ್ಟ ಸಿಕ್ಕ ಬಳಿಕ ಅವರ ಸಿನಿಮಾ ಕರಿಯರ್ ಮಾತ್ರ ವೇಗ ಪಡೆದುಕೊಳ್ಳಲೇ ಇಲ್ಲ. ಸಾಕಷ್ಟು ಸಿನಿಮಾಗಳಲ್ಲಿ ಅವರ ಹೆಸರು ತಳುಕು ಹಾಕಿಕೊಂಡರೂ, ಅಧಿಕೃತ ಅಂತ ಆಗಿದ್ದು ಅಕ್ಷಯ್ ಕುಮಾರ್ ಜತೆಗಿನ ಪೃಥ್ವಿರಾಜ್​ ಸಿನಿಮಾವೊಂದೆ.

ಇದೀಗ ಪೃಥ್ವಿರಾಜ್​ ಸಿನಿಮಾ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಬಿಡುಗಡೆಗು ಮುನ್ನ ಚಿತ್ರದ ಪ್ರಚಾರದ ಭಾಗವಾಗಿ ಮಾಧ್ಯಮ ಸಂದರ್ಶನಗಳಲ್ಲಿ ಭಾಗವಹಿಸಿದ ಮಾನುಷಿ ಚಿಲ್ಲರ್​ ಕೆಲವೊಂದು ಆಸಕ್ತಿದಾಯ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಆರ್​ಆರ್​ಆರ್​ ಸಿನಿಮಾ ವೀಕ್ಷಣೆ ಬಳಿಕ ನಾನು ರಾಮ್​ಚರಣ್​ ಅಭಿಮಾನಿಯಾಗಿದ್ದೇನೆ. ಅವರ ಜತೆ ನಟಿಸಲು ಬಯಸಿದ್ದೇನೆ. ಒಂದು ವೇಳೆ ರಾಮ್​ಚರಣ್​ ಅವರಿಗೆ ಮದುವೆ ಆಗಿರದಿದ್ದರೆ, ನಾನೇ ಅವರ ಬಳಿ ಹೋಗಿ ಡೇಟಿಂಗ್​ಗೆ ಕರೆಯುತ್ತಿದ್ದೆ. ಈಗಲೂ ರಾಮ್​ಚರಣ್​ ಡೇಟಿಂಗ್​ಗೆ ಒಪ್ಪಿದರೆ, ಇಬ್ಬರು ಒಟ್ಟಿಗೆ ಸಿನಿಮಾ ವೀಕ್ಷಿಸಲಿದ್ದೇವೆ ಮತ್ತು ನೆಚ್ಚಿನ ತಿನಿಸುಗಳನ್ನು ತಿನ್ನುತ್ತಾ ಪರಸ್ಪರ ಮಾತುಕತೆ ನಡೆಸುತ್ತೇವೆ ಎಂದು ಮಾನುಷಿ ಹೇಳಿದ್ದಾರೆ.

ಸದ್ಯ ಮಾನುಷಿ ಚಿಲ್ಲರ್​ ಹೇಳಿಕೆ ರಾಮ್​ಚರಣ್​ ಅಭಿಮಾನಿಗಳಿಗೆ ಖುಷಿ ತರಿಸಿದೆ. ನೀವು ಅಂದುಕೊಂಡಂತೆ ರಾಮ್​ಚರಣ್​ ಜತೆ ನಟಿಸುವಂತಾಗಲಿ ಎಂದು ಹರಸಿದ್ದಾರೆ. ಪೃಥ್ವಿರಾಜ್​, ಮಾನುಷಿ ಅವರ ಮೊದಲ ಚಿತ್ರವಾಗಿದ್ದು, ಇಂದು ದೇಶಾದ್ಯಂತ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳಲ್ಲಿ ಮಾನುಷಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net