

ಚೆನ್ನೈ: ಕಾಲಿವುಡ್ ಸ್ಟಾರ್ ನಟ ವಿಶಾಲ್ ಕೃಷ್ಣ ರೆಡ್ಡಿ ಅಲಿಯಾಸ್ ವಿಶಾಲ್ಗೆ ಮದ್ರಾಸ್ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ವಿಶಾಲ್ ವಿರುದ್ಧ ಲೈಕಾ ಪ್ರೊಡಕ್ಷನ್ಸ್ ದೂರು ದಾಖಲಿಸಿತ್ತು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣವನ್ನು ವಜಾಗೊಳಿಸಿ, ನಟ ವಿಶಾಲ್ಗೆ 5 ಲಕ್ಷ ರೂ. ನೀಡುವಂತೆ ಲೈಕಾ ಕಂಪನಿಗೆ ಕೋರ್ಟ್ ಆದೇಶಿಸಿದೆ.
ವಿಶಾಲ್ ಅಭಿನಯದ ಸಿನಿಮಾ ಚಕ್ರ ವಿರುದ್ಧ ಲೈಕಾ ಪ್ರೊಡಕ್ಷನ್ ದೂರು ದಾಖಲಿಸಿತ್ತು. ನಾವು ವಿಶಾಲ್ಗೆ 21.29 ಕೋಟಿ ರೂಪಾಯಿಗಳನ್ನು ನೀಡಿದ್ದು, ವಿಶಾಲ್ ಬಡ್ಡಿ ಮೊತ್ತವನ್ನು ಸೇರಿಸಿ ಸುಮಾರು 30 ಕೋಟಿ ರೂಪಾಯಿಯನ್ನು ನೀಡಲು ಆದೇಶಿಸಬೇಕು ಎಂದು ದೂರಿನಲ್ಲಿ ಲೈಕಾ ಪ್ರೊಡಕ್ಷನ್ ಉಲ್ಲೇಖಿಸಿತ್ತು. ಆದರೆ, ನ್ಯಾಯಮೂರ್ತಿ ಜಿ. ಜಯಚಂದ್ರನ್ ಪ್ರಕರಣವನ್ನೇ ವಜಾಗೊಳಸಿದ್ದಾರೆ.
ವಿಶಾಲ್ ಸಲ್ಲಿಸಿರುವ ಅಫಿಡೆವಿಟ್ಗೆ ಪ್ರತಿಯಾಗಿ ಲೈಕಾ ಕಂಪನಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ದುರುದ್ದೇಶಪೂರಿತ ವಾಕ್ಯಗಳಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದ್ದು, ನಟ ವಿಶಾಲ್ ತನ್ನ ಸಂಪೂರ್ಣ ಹೊಣೆಗಾರಿಕೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಸುಳ್ಳು ಹೇಳಿರುವುದನ್ನು ಕೋರ್ಟ್ ಟೀಕಿಸಿದೆ.
ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ವಿಶಾಲ್, ನ್ಯಾಯ ರಕ್ಷಿಸಲ್ಪಡುತ್ತದೆ. ಸತ್ಯಕ್ಕೆ ಜಯ ಸಿಗುತ್ತದೆ ಎಂದು ನಾನು ಯಾವಾಗಲು ನಂಬಿದ್ದೇನೆ. ನನ್ನ ಮತ್ತು ನನ್ನ ಸಿನಿಮಾ ವಿರುದ್ಧ ಲೈಕಾ ದಾಖಲಿಸಿದ್ದ ಸುಳ್ಳು ದೂರನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಮತ್ತು ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ ಎಂದಿದ್ದಾರೆ.
ಅಂದಹಾಗೆ ಚಕ್ರ ಸಿನಿಮಾವನ್ನು ಎಂ.ಎಸ್.ಆನಂದನ್ ನಿರ್ದೇಶಿಸಿದ್ದು, ವಿಶಾಲ್, ಶ್ರದ್ಧಾ ಶ್ರೀನಾಥ್ ಮತ್ತು ರೆಜಿನಾ ಕ್ಯಾಸ್ಸಂದ್ರ ನಟಿಸಿದ್ದಾರೆ. ವಿಶಾಲ್ ಮಿಲಿಟರಿ ಅಧಿಕಾರಿಯಾಗಿ ಮತ್ತು ಶ್ರದ್ಧಾ ಶ್ರೀನಾಥ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)