

ಹೈದರಾಬಾದ್: ನಟ ವಿಜಯ್ ದೇವರಕೊಂಡ ಅವರು ಲೈಗರ್ ಸಿನಿಮಾದಲ್ಲಿ ನಟಿಸುತ್ತಿರುವುದು ಬಹುತೇಕರಿಗೆ ತಿಳಿದಿದೆ. ಇದೀಗ ಆ ಚಿತ್ರದ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು, ವಿಜಯ್ ಅವರು ಬೆತ್ತಲೆಯಾಗಿ ಕಾಣಿಸಿಕೊಳ್ಳುವ ಮೂಲಕ ಸಿನಿ ಮಂದಿಯ ಹುಬ್ಬೇರಿಸುವಂತೆ ಮಾಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಪೋಸ್ಟರ್ ಶೇರ್ ಮಾಡಿರುವ ವಿಜಯ್, ಈ ಒಂದು ಚಿತ್ರ ನನ್ನಿಂದ ಎಲ್ಲವನ್ನು ಪಡೆದುಕೊಂಡ ಚಿತ್ರ. ನಟನೆಯಾಗಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ನನ್ನದು ಅತ್ಯಂತ ಸವಾಲಿನ ಪಾತ್ರ. ನಾನು ನಿಮಗೆ ಎಲ್ಲವನ್ನು ನೀಡಿದ್ದೇನೆ. ಶೀಘ್ರದಲ್ಲೇ ನಿಮ್ಮೆದುರಿಗೆ ಬರಲಿದೆ ಲೈಗರ್ ಎಂದು ಬರೆದುಕೊಂಡಿದ್ದಾರೆ. ಫೋಟೋ ಪೋಸ್ಟ್ ಮಾಡಿದ ಕೇವಲ 3 ಗಂಟೆಗಳಲ್ಲೇ 9 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.
ಲೈಗರ್ ಸಿನಿಮಾಗಾಗಿ ವಿಜಯ್ ತಮ್ಮನ್ನು ತಾವು ಸಂಪೂರ್ಣ ಅರ್ಪಿಸಿಕೊಂಡಿರುವ ರೀತಿಗೆ ಸಹೋದ್ಯೋಗಿಗಳು ಮತ್ತು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.
ಸಮಂತಾ ಅವರು ಪ್ರತಿಕ್ರಿಯೆ ನೀಡಿದ್ದು, ಆತನಿಗೆ ನಿಯಮಗಳ ಬಗ್ಗೆ ಗೊತ್ತಿದೆ. ಆದ್ದರಿಂದ ಅವನು ಅವುಗಳನ್ನು ಮುರಿಯಬಹುದು. ಧೈರ್ಯ ಮತ್ತು ವೈಭವ ಎಂದು ಸಮಂತಾ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಬಾಹುಬಲಿ ದೇವಸೇನಾ ಅಲಿಯಾಸ್ ಅನುಷ್ಕಾ ಶೆಟ್ಟಿ ಕೂಡ ಪೋಸ್ಟರ್ ಅನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಲೈಗರ್ ತಂಡಕ್ಕೆ ಶುಭ ಹಾರೈಸುತ್ತೇನೆ. ಈ ಚಿತ್ರವು ಪ್ರತಿಯೊಬ್ಬರ ಹೃದಯವನ್ನು ತಲುಪಲಿ. ಪುರಿ ಜಗನ್ನಾಥ್ ಅವರೇ ನಿಮ್ಮ ಮ್ಯಾಜಿಕ್ಗಾಗಿ ಎದುರು ನೋಡುತ್ತಿದ್ದೇನೆ. ವಿಜಯ್ ನಿಮಗೆ ಶುಭ ಹಾರೈಸುತ್ತೇನೆ. ನೀವು ಪ್ರತಿ ಬಾರಿಯೂ ಉತ್ತಮವಾದುದ್ದನ್ನು ಮಾಡುತ್ತೀರಿ. ಕರಣ್ ಜೋಹರ್ ಜೀ ಸುಂದರವಾದ ಕಥೆಗಳ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ಪ್ರತಿಯೊಬ್ಬ ಕಲಾವಿದರಿಗೆ, ತಂತ್ರಜ್ಞರಿಗೆ ಶುಭವಾಗಲಿ ಎಂದಿದ್ದಾರೆ.
ಲೈಗರ್ ಸಿನಿಮಾದಲ್ಲಿ ವಿಜಯ್ಗೆ ನಾಯಕಿಯಾಗಿರುವ ಅನನ್ಯಾ ಪಾಂಡೆ ಕೂಡ ಪೋಸ್ಟರ್ ಶೇರ್ ಮಾಡಿಕೊಂಡಿದ್ದು, ಉಸಿರಾಡಿ ಗಯ್ಸ್ ಉಸಿರಾಡಿ...ಇಂದು ಭಾರತದಾದ್ಯಂತ ತಾಪಮಾನ ಹೆಚ್ಚುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಈ ಸಿನಿಮಾದ ನಿರ್ಮಾಪಕ ಕರಣ್ ಜೋಹರ್ ಕೂಡ ಪೊಸ್ಟರ್ ಶೇರ್ ಮಾಡಿಕೊಂಡಿದ್ದು, ರೋಸ್ ರೋಸ್ ಐಸೆ ಗಿಫ್ಟ್ಸ್ ನಹಿ ಮಿಲ್ತೆ ಎಂದು ಬರೆದುಕೊಂಡಿದ್ದಾರೆ.
ಲೈಗರ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಬಾಕ್ಸರ್ ಪಾತ್ರ ಮಾಡುತ್ತಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶಿಸುವುದರ ಜತೆಗೆ, ಕರಣ್ ಜೋಹರ್ ಜತೆಗೆ ಸೇರಿ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಈ ಚಿತ್ರ ಆಗಸ್ಟ್ 25ಕ್ಕೆ ದೇಶಾದ್ಯಂತ ತೆರೆಗೆ ಅಪ್ಪಳಿಸಲಿದೆ. (ಏಜೆನ್ಸೀಸ್)