

ಹೈದರಾಬಾದ್: ನಟ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣದಿಂದ ಇಡೀ ಭಾರತೀಯ ಚಿತ್ರರಂಗವೇ ಆಘಾತಕ್ಕೆ ಒಳಗಾಗಿದೆ. ಪುನೀತ್ ನಿಧನದ ಸುದ್ದಿ ಅಧಿಕೃತವಾಗಿ ಘೋಷಣೆ ಆಗುವ ಮೊದಲೇ ಪುನೀತ್ ಇನ್ನಿಲ್ಲ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತು. ಸಾಕಷ್ಟ ಸಮಯದ ಬಳಿಕ ಅ.29ರಂದು ಮಧ್ಯಾಹ್ನದ ಹೊತ್ತಿಗೆ ಪುನೀತ್ ಮೃತಪಟ್ಟಿರುವ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಲಾಯಿತು.
ಆದರೆ, ಅದೇ ದಿನ ಕಾಲಿವುಡ್ ನಟಿ ಲಕ್ಷ್ಮಿ ಮಂಚು ಮಾಧ್ಯಮಗಳಲ್ಲಿ ಅಥವಾ ವೈದ್ಯರು ಹಾಗೂ ಪುನೀತ್ ಕುಟುಂಬದಿಂದ ಅಧಿಕೃತ ಘೋಷಣೆ ಆಗುವ ಮುನ್ನವೇ ಪುನೀತ್ ನಿಧನದ ಸುದ್ದಿ ಬಗ್ಗೆ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದರು.
ಅಯ್ಯೋ ದೇವರೆ... ಇಲ್ಲ... ಇದು ಖಂಡಿತ ನಿಜವಾಗಬಾರದು! ಇದು ಹೇಗೆ ಸಾಧ್ಯ? ಪುನೀತ್ ಕುಟುಂಬಕ್ಕೆ ನನ್ನ ಸಂತಾಪಗಳು. ಪುನೀತ್ ಆತ್ಮಕ್ಕೆ ಶಾಂತಿ ದೊರಕಲಿ. ತುಂಬಾ ಬೇಗನೇ ಹೊರಟುಬಿಟ್ಟಿರಿ ಎಂದು ಲಕ್ಷ್ಮಿ ಮಂಚು ಅ. 29ರಂದು ಮಧ್ಯಾಹ್ನ 1.22ಕ್ಕೆ ಟ್ವೀಟ್ ಮಾಡಿದ್ದಾರೆ. ಆದರೆ, ಆಗಿನ್ನು ಅಧಿಕೃತವಾಗಿ ಘೋಷಣೆ ಆಗಿರಲಿಲ್ಲ.
ನಟಿ ಲಕ್ಷ್ಮೀ ಮಂಚು ಮಾಡಿದ ಟ್ವೀಟ್ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶಗಳು ವ್ಯಕ್ತವಾಗಿವೆ. ಇದು ಒಬ್ಬ ವ್ಯಕ್ತಿಯ ಬಗ್ಗೆ ನಿಮಗಿರುವ ಗೌರವವನ್ನು ತೋರಿಸುತ್ತದೆ. ಸುದ್ದಿ ದೃಢೀಕರಣವಿಲ್ಲದೆ ನೀವು ಸುದ್ದಿಯನ್ನು ಪ್ರಕಟಿಸುವ ಅಗತ್ಯವೇನಿತ್ತು?’ ಎಂದು ಆಕೆಯನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ. ವ್ಯಕ್ತಿಯೊಬ್ಬರ ಸಾವಿಗೆ ಮತ್ತು ಅವರ ಕುಟುಂಬಕ್ಕೆ ಕೊಡುವ ಗೌರವ ಇದೇನಾ? ಎಂದು ಲಕ್ಷ್ಮೀ ಮಂಚು ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಇನ್ಮುಂದೆ ಈ ರೀತಿ ಮಾಡಬೇಡಿ. ಮಾಹಿತಿ ಖಚಿವಾದ ಬಳಿಕವೇ ಪೋಸ್ಟ್ ಅಥವಾ ಟ್ವೀಟ್ ಮಾಡಿ ಎಂದು ಸಲಹೆ ನೀಡಿದ್ದಾರೆ. (ಏಜೆನ್ಸೀಸ್)