ಕೆಜಿಎಫ್​-2 ಕುರಿತ ಸರಣಿ ಟ್ವೀಟ್​ ಡಿಲೀಟ್​ ಮಾಡಿ ಉಲ್ಟಾ ಹೊಡೆದ ವಿಮರ್ಶಕ ಯಶ್​​ ಬಗ್ಗೆ ಹೇಳಿದ್ದಿಷ್ಟು...

KGF 2
Published on

ಬೆಂಗಳೂರು​: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​ 2 ಬಿಡುಗಡೆಯಾದ ದಿನ ಚಿತ್ರವನ್ನು ವೀಕ್ಷಣೆ ಮಾಡಿ ಇದೊಂದು ಟಾರ್ಚರ್​ ಹಾಗೂ ಲದ್ದಿ ಸಿನಿಮಾ ಎಂದು ಸರಣಿ ಟ್ವೀಟ್​ ಮೂಲಕ ಟೀಕಾ ಪ್ರಹಾರ ನಡೆಸಿದ್ದ ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಎಂದು ಕರೆಸಿಕೊಳ್ಳುವ ಕಮಲ್​ ಆರ್​ ಖಾನ್​ ಅಲಿಯಾಸ್​ ಕೆಆರ್​ಕೆ ಇದೀಗ ಟ್ವೀಟ್​ಗಳನ್ನು ಡಿಲೀಟ್​ ಮಾಡಿ ಉಲ್ಟಾ ಹೊಡೆದಿದ್ದು, ಕೆಜಿಎಫ್​ 2 ಸಿನಿಮಾವನ್ನು ಕೊಂಡಾಡಿದ್ದಾರೆ.

ಬಾಲಿವುಡ್​ ಮತ್ತು ದಕ್ಷಿಣ ಭಾರತದ ಸಿನಿರಂಗದಲ್ಲಿ ಬಹುದೊಡ್ಡ ಸೂಪರ್​ ಸ್ಟಾರ್​ ಆದ ರಾಕಿಂಗ್​ ಸ್ಟಾರ್​ ಯಶ್​ ಅವರಿಗೆ ಅಭಿನಂದನೆಗಳು. ಅವರ ಚಿತ್ರ ಕೆಜಿಎಫ್​ 2 ಹಿಂದಿ ಒಂದರಲ್ಲೇ 500 ಕೋಟಿ ರೂಪಾಯಿ ಗಳಿಕೆ ಮಾಡಲಿದೆ ಎಂದು ಹೇಳುವ ಮೂಲಕ ಯಶ್​ ಮತ್ತು ಕೆಜಿಎಫ್​ 2 ಚಿತ್ರವನ್ನು ಕೊಂಡಾಡಿದ್ದಾರೆ.

ಈ ಹಿಂದೆ ನೆಗಿಟಿವ್​ ಟ್ವೀಟ್​ ಮಾಡಿದ್ದ ಕೆಆರ್​ಕೆ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಅಷ್ಟಕ್ಕೆ ಕೆಆರ್​ಕೆ ಈ ಹಿಂದೆ ಹೇಳಿದ್ದೇನು ಎಂದು ನೋಡುವುದಾದರೆ, ಕೆಜಿಎಫ್​ ಸಿನಿಮಾದ ಆರಂಭದ 30 ನಿಮಿಷ ಏನು ನಡೆಯುತ್ತಿದೆ ಎಂದು ಅರ್ಥ ಆಗಲಿಲ್ಲ. ಬರೀ ಡೈಲಾಗಳೇ ತುಂಬಿದ್ದವು. ಆರ್​ಆರ್​ಆರ್​ಗಿಂತಲೂ ಕಡೆಯಾಗಿತ್ತು. ಇದೊಂದು ಕಳಪೆ ಸಿನಿಮಾ. ಸಿನಿಮಾದಲ್ಲಿ ಏನೇನು ಇಲ್ಲ. ಈ ಚಿತ್ರಕ್ಕೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಇಂತಹ ಟಾಪ್ ಕ್ಲಾಸ್ ಲದ್ದಿ ಚಿತ್ರವನ್ನು ಮಾಡಿದ್ದಕ್ಕಾಗಿ ನಾಚಿಕೆಪಡಬೇಕು ಎಂದಿದ್ದರು.

KGF ಚಾಪ್ಟರ್ 2ನಂತಹ ಸಿನಿಮಾ ಮಾಡಿ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಮೂರ್ಖರನ್ನಾಗಿಸಿ ಲೂಟಿ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್​ ಅವರನ್ನು ಜೀವಮಾನವಿಡೀ ಜೈಲಿನಲ್ಲಿ ಇಡಬೇಕು. ಮೇಕಿಂಗ್​ ಹೆಸರಿನಲ್ಲಿ ಕೇವಲ ದುಂದುವೆಚ್ಚ ಮಾಡಲಾಗಿದೆ. ಕತೆಯೇ ಇಲ್ಲ. ಮೆದುಳೇ ಇಲ್ಲದ ಇಂತಹ ನಿರ್ದೇಶಕನನ್ನು ಯಾವೋಬ್ಬ ನಟನು ಪ್ರೋತ್ಸಾಹ ನೀಡಬಾರದು ಎಂದು ಟೀಕಿಸಿದ್ದರು.

ಭಾರತದ ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆಯು ಕೇವಲ ಒಬ್ಬ ವ್ಯಕ್ತಿ ರಾಕಿ ಜತೆ ಹೋರಾಡಲು ಆಗಲಿಲ್ಲ. ಪ್ರಧಾನ ಮಂತ್ರಿಗಳಿಗೆ ಬೆದರಿಕೆ ಹಾಕಲು ರಾಕಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಎಂಟ್ರಿ ಕೊಡುತ್ತಾನೆ. ಅದ್ಭುತ! ಪ್ರಶಾಂತ್ ಭಾಯ್ ಈಗ, ಭಾರತವು ಪಾಕಿಸ್ತಾನ ಮತ್ತು ಚೀನಾದೊಂದಿಗೆ ಹೇಗೆ ಹೋರಾಡುತ್ತದೆ? ಎಂದು ವ್ಯಂಗ್ಯವಾಡಿದ್ದರು.

ಈ ಸಿನಿಮಾ ಮೂರು ಗಂಟೆಗಳ ಟಾಪ್​ಕ್ಲಾಸ್​ ಟಾರ್ಚರ್​ ಸಿನಿಮಾ ಆಗಿದೆ. ಮೇಕಿಂಗ್​ ಹೆಸರಿನಲ್ಲಿ ಹಣ ಮತ್ತು ಸಮಯವನ್ನು ವ್ಯರ್ಥ ಮಾಡಲಾಗಿದೆ. ಒಂದು ವೇಳೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್​ ಮಾಡಿದರೆ ಬಾಲಿವುಡ್ ಮುಗಿದಂತೆ. ಏಕೆಂದರೆ, ಬಾಲಿವುಡ್‌ನಲ್ಲಿ ಇಂತಹ ಸಿನಿಮಾ ಮಾಡಿದರೆ ಆ ಚಿತ್ರ ಅನಾಹುತವಾಗುವುದು ಖಚಿತ. ಈ ಚಿತ್ರಕ್ಕೆ ನನ್ನ ರೇಟಿಂಗ್​ ಥೂ.. ಅಷ್ಟೇ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊನೆಯಲ್ಲಿ ಯಶ್​ ವಿರುದ್ಧ ಕಿಡಿಕಾರಿರುವ ಕಮಲ್​ ಆರ್​ ಖಾನ್​, ಯಶ್​ ಬ್ರೋ ಕೇವಲ ಒಂದೇ ಗಂಟೆಯಲ್ಲಿ ನೀವು ರಷ್ಯಾವನ್ನು ಸೋಲಿಸಬಹುದು. ನಿಮ್ಮ ಕನ್ನಡಕವನ್ನು ತೆಗೆಯದೇ ಯೂಕ್ರೇನ್ ಅನ್ನು ರಷ್ಯಾದಿಂದ ಕಾಪಾಡಬಹುದು. ಮೊದಲು ಅದನ್ನು ಮಾಡಿ ಲಕ್ಷಾಂತರ ಮಂದಿಯನ್ನು ಕಾಪಾಡಿ. ಈ ಸಿನಿಮಾ ಮಾಡಿದ ನಿಮಗೆ ನಾಚಿಕೆಯಾಗಬೇಕು. ಆ ಥೂ... ಈ ಸಿನಿಮಾಗೆ ಇದೇ ನನ್ನ ರೇಟಿಂಗ್​ ಎಂದು ಟ್ವೀಟ್​ ಮಾಡಿ ಯಶ್​ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.​

ಕೆಆರ್​ಕೆ ಇದೇ ಮೊದಲೇನಲ್ಲ ಈ ರೀತಿ ಮಾತನಾಡಿರುವುದು. ಈ ಮೊದಲ ಆರ್​ಆರ್​ಆರ್​ ಸಿನಿಮಾಗೂ ಇದೇ ರೀತಿ ಕಾಮೆಂಟ್​ ಮಾಡಿದ್ದರು. ಇದೀಗ ಕೆಜಿಎಫ್​ ಸಿನಿಮಾಗೆ ಕೆಟ್ಟ ವಿಮರ್ಶೆ ನೀಡಿದ್ದು, ಯಶ್​ ಅಭಿಮಾನಿಗಳು ಕೆಆರ್​ಕೆ ವಿರುದ್ಧ ಮುಗಿಬಿದ್ದಿದ್ದಾರೆ. ಉತ್ತಮ ವಿಮರ್ಶೆಗಳು ಬರುತ್ತಿವೆ ಮತ್ತು ಬಾಕ್ಸ್​ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ. ಇಂತಹ ಚಿತ್ರಕ್ಕೆ ಅದ್ಹೇಗೆ ನೆಗಿಟಿವ್​ ವಿಮರ್ಶೆ ನೀಡುತ್ತೀರಾ ಎಂದು ಕಿಡಿಕಾರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net