ಸಾಲು ಸಾಲು ಚಿತ್ರಗಳು ಸೋತರೂ ಪೂಜಾ ಹೆಗ್ಡೆಗೆ ಕಿಂಚಿತ್ತೂ ಕಡಿಮೆ ಆಗಿಲ್ಲ ಡಿಮ್ಯಾಂಡ್!

Pooja Hegde
Published on

ಈ ವರ್ಷ ಬಿಡುಗಡೆಯಾದ ಮೂರು ಚಿತ್ರಗಳು ಸೋತರೂ, ಪೂಜಾ ಹೆಗ್ಡೆಗೆ ಕಿಂಚಿತ್ತೂ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಈಗಲೂ ಪೂಜಾಗೆ ಟಾಲಿವುಡ್​ನಲ್ಲಿ ಅಷ್ಟೇ ಬೇಡಿಕೆ ಇದ್ದು, ಇನ್ನೊಂದಿಷ್ಟು ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅದರ ಮೊದಲ ಹಂತವಾಗಿ ಪೂಜಾ, ವಿಜಯ್ ದೇವರಕೊಂಡ ಅಭಿನಯದ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕೆಲವು ತಿಂಗಳುಗಳ ಹಿಂದೆ ವಿಜಯ್ ದೇವರಕೊಂಡ ಅಭಿನಯದಲ್ಲಿ ಪುರಿ ಜಗನ್ನಾಥ್ ನಿರ್ದೇಶನದ ‘ಜನ ಗಣ ಮನ’ ಎಂಬ ಹೊಸ ಚಿತ್ರವನ್ನು ಪ್ರಾರಂಭಿಸಿದ್ದು ನೆನಪಿರಬಹುದು. ಈ ಚಿತ್ರಕ್ಕೆ ವಿಜಯ್ ನಾಯಕ ಎಂದು ಹೇಳಲಾಗಿತ್ತೇ ಹೊರತು, ಅವರಿಗೆ ನಾಯಕಿ ಯಾರಾಗಬಹುದು ಎಂಬ ವಿಷಯವನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಈಗ ಚಿತ್ರಕ್ಕೆ ನಾಯಕಿಯಾಗಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ.

ಈಗಾಗಲೇ ಟಾಲಿವುಡ್​ನ ಜನಪ್ರಿಯ ನಾಯಕರ ಜತೆಗೆ ಒಂದು ರೌಂಡು ನಟಿಸಿರುವ ಪೂಜಾ, ವಿಜಯ್ ಜತೆಗೆ ಇನ್ನೂ ನಟಿಸಿರಲಿಲ್ಲ. ಅದು ‘ಜನ ಗಣ ಮನ’ದಿಂದ ಸಾಧ್ಯವಾಗುತ್ತಿದೆ. ಜೂನ್ ಮೊದಲ ವಾರದಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಈ ಹಂತದ ಚಿತ್ರೀಕರಣದಲ್ಲಿ ಪೂಜಾ ಸಹ ಭಾಗವಹಿಸುತ್ತಾರಂತೆ. ಈ ಚಿತ್ರವು ಮುಂದಿನ ವರ್ಷ ಬಿಡುಗಡೆಯಾಗಲಿದೆಯಂತೆ.

ಅಂದಹಾಗೆ, ಸಲ್ಮಾನ್ ಖಾನ್ ಅಭಿನಯದ ‘ಕಭಿ ಈದ್ ಕಭಿ ದಿವಾಲಿ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಪೂಜಾ, ತೆಲುಗು ಚಿತ್ರದಲ್ಲೊಂದಿಷ್ಟು ದಿನ ನಟಿಸಿ, ಪುನಃ ಮುಂಬೈ ಫ್ಲೈಟು ಹತ್ತಲಿದ್ದಾರಂತೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net